ಕಾಂಗ್ರೆಸ್‍ನವ್ರು ಭಿಕ್ಷೆ ಕೇಳಿದ್ರೆ ಎಡಗೈಯಲ್ಲೇ ಭಿಕ್ಷೆ ನೀಡ್ತೀನಿ, ಇನ್ಮುಂದೆ ಸಾಯುವವರೆಗೆ ಪಂಚೆಯನ್ನೇ ಧರಿಸ್ತೀನಿ- ಜನಾರ್ದನ ರೆಡ್ಡಿ

ಬೆಂಗಳೂರು: ಕಾಂಗ್ರೆಸ್ ನವರು ಈಗಲೂ ನನ್ನ ಬಳಿ ಭಿಕ್ಷೆ ಕೇಳಿದ್ರೆ ಎಡಗೈಯಲ್ಲಿ ಭಿಕ್ಷೆ ನೀಡುವುದಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಕಾಂಗ್ರೆಸ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ದೊಮ್ಮಸಂದ್ರದಲ್ಲಿ ಬಿಜೆಪಿ ವತಿಯಿಂದ ಸಂಕ್ರಾಂತಿ ಸಂಭ್ರಮದಲ್ಲಿ ಭಾಗವಹಿಸಿದ ಜನಾರ್ದನರೆಡ್ಡಿ ರೆಡ್ಡಿ, ಮಾತಿನುದಕ್ಕೂ ಸಿದ್ದರಾಮಯ್ಯ ಒಬ್ಬ ದುಷ್ಟ ವ್ಯಕ್ತಿಯೆಂದು ಏಕವಚನದಲ್ಲಿ ಸಂಬೋದಿಸಿದ್ರು. ಒಂದು ಲಕ್ಷ ಕೋಟಿ ಅಕ್ರಮ ಸಂಪತ್ತಿದೆಯೆಂದು ಆರೋಪ ಮಾಡಿದ ಕಾಂಗ್ರೆಸ್ ಸರ್ಕಾರ ನನ್ನಿಂದ ಬಿಡಿಗಾಸು ಸಹ ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಅಂದ್ರು. ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ಪಕ್ಷದವರು ನನ್ನ ಬಳಿ ಬಂದು ಭಿಕ್ಷೆ ಬೇಡಿದ್ರೆ ಎಡಗೈಯಲ್ಲಿ ಭಿಕ್ಷೆ ನೀಡುತ್ತಿದ್ದೆ ಎಂದು ಹೇಳಿದರು.

ನನ್ನ ವಿರುದ್ಧ ಸುಳ್ಳು ಆರೋಪಗಳನ್ನ ಮಾಡಿ 42 ತಿಂಗಳು ನನ್ನ ಜೈಲಿನಲ್ಲಿ ಇರಿಸಿದ್ದರು. ಕೇಂದ್ರದಲ್ಲಿ ಯುಪಿಎ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಇದ್ದರೂ ನನ್ನನ್ನು ಏನು ಮಾಡ್ಲಿಕ್ಕೆ ಸಾಧ್ಯವಾಗಿಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡಿತೇ ಹೊರತು ಏನು ಮಾಡಲು ಸಾಧ್ಯವಾಗಿಲ್ಲವೆಂದು ಕಾಂಗ್ರೆಸ್ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ರು.

ಮುಂದೆ ಬಿಜೆಪಿ ಪಕ್ಷ ಅವಕಾಶ ಕೊಟ್ಟು ದೇವರ ಆಶಿರ್ವಾದ ಸಿಕ್ಕರೆ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಯಾವ ದುಸ್ಥಿತಿಗೆ ತರುತ್ತೇನೆ ನೋಡಿ. ನಾನು ಜೈಲಿನಲ್ಲಿದ್ದಾಗ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಚಾಮುಂಡಿ ತಾಯಿಗೆ ಶೂ ಹಾಕಿಕೊಂಡೇ ಪುಷ್ಪಾರ್ಚನೆ ಮಾಡಿದ್ದು ಅವರ ಅಹಂಕಾರ ತೋರುತ್ತಿತ್ತು ಅಂತ ಹೇಳಿದ್ರು.

ಇದೇ ವೇಳೆ ಮಾತು ಮುಂದುವರೆಸಿ ಬಿಜೆಪಿ ನನಗೆ ಅವಕಾಶ ನೀಡಿದರೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತೇನೆಂದು ತಿಳಿಸುತ್ತಾ, ನಾನು ಇನ್ಮುಂದೆ ಸಾಯುವವರೆಗೆ ರೈತನ ಪೋಷಾಕು ಪಂಚೆಯನ್ನೇ ಧರಿಸುತ್ತೇನೆಂದು ಘೋಷಣೆ ಮಾಡಿದರು.

Comments

Leave a Reply

Your email address will not be published. Required fields are marked *