60 ಲಕ್ಷ ಟಿಕ್‍ಟಾಕ್ ವಿಡಿಯೋ ಡಿಲೀಟ್

ನವದೆಹಲಿ: ಟಿಕ್ ಟಾಕ್ ತನ್ನ ಆ್ಯಪ್‍ನಲ್ಲಿದ್ದ ಬರೋಬ್ಬರಿ 60 ಲಕ್ಷ ವಿಡಿಯೋಗಳನ್ನು ಡಿಲೀಟ್ ಮಾಡಿದೆ.

ಕಂಪನಿ ಸಾಮಾಜಿಕವಾಗಿ ಬಲಿಷ್ಠಗೊಳಿಸಿಕೊಳ್ಳಲು ಅಪರಾಧ, ಅಶ್ಲೀಲ, ಕೋಮುಭಾವನೆ ಪ್ರಚೋದನೆ ಸೇರಿದಂತಹ 60 ಲಕ್ಷ ವಿಡಿಯೋಗಳನ್ನು ಡಿಲೀಟ್ ಮಾಡಿಕೊಂಡಿದೆ.

ಭಾರತದಲ್ಲಿ ಟಿಕ್‍ಟಾಕ್ ವಿಡಿಯೋಗಳಿಗೆ ಸಂಬಂಧಿಸಿದಂತೆ ವಿರೋಧಗಳು ವ್ಯಕ್ತವಾಗಿವೆ. ಈ ಸಂಬಂಧ ಭಾರತ ಸರ್ಕಾರ ಸಹ ಟಿಕ್‍ಟಾಕ್ ಕಂಪನಿಗೆ ನೋಟಿಸ್ ನೀಡಿ ಕೆಲವು ವಿಷಯಗಳ ಕುರಿತು ಸ್ಪಷ್ಟನೆ ಕೇಳಿತ್ತು. ಅಪರಾಧ, ಅಶ್ಲೀಲ, ಕೋಮುಭಾವನೆ ಪ್ರಚೋದನೆ ಮತ್ತು ದೇಶ ದ್ರೋಹಕ್ಕೆ ಸಂಬಂಧಿಸಿದ ಅಂಶಗಳ ಕುರಿತು ಮಾಹಿತಿ ನೀಡುವಂತೆ ನೋಟಿಸಿನಲ್ಲಿ ತಿಳಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಟಿಕ್‍ಟಾಕ್ ಇಂಡಿಯಾ ಸೇಲ್ಸ್ ಆ್ಯಂಡ್ ಪಾಟರ್ನರ್ ಶಿಪ್ ನಿರ್ದೇಶಕ ಸಚಿನ್ ಶರ್ಮಾ, ಬಳಕೆದಾರರ ಟ್ಯಾಲೆಂಟ್ ಮತ್ತು ಕ್ರಿಯೇಟಿವಿಟಿ ತೋರಿಸುವ ವೇದಿಕೆಯನ್ನು ಟಿಕ್‍ಟಾಕ್ ನಿರ್ಮಿಸಿದೆ. ಹಾಗಾಗಿ ಸುರಕ್ಷಿತ ಮತ್ತು ಸಕಾರತ್ಮಕ ಅಂಶದ ಅವಕಾಶಗಳನ್ನು ಒದಗಿಸಲು ಟಿಕ್‍ಟಾಕ್ ವೇದಿಕೆ ಸಿದ್ಧವಿದೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಪ್ರಚೋದನೆ ನೀಡಲ್ಲ. ಟಿಕ್‍ಟಾಕ್ ಆ್ಯಪ್ ಅಭಿವೃದ್ಧಿ ಪಡಿಸಿದ ಬೈಟ್‍ಡ್ಯಾನ್ಸ್ ಪ್ರಕಾರ ಭಾರತದಲ್ಲಿ 20 ಕೋಟಿಗೂ ಅಧಿಕ ಬಾರಿ ಆ್ಯಪ್ ಡೌನ್‍ಲೋಡ್ ಆಗಿದ್ದು, ಹೊಸ ಬಳಕೆದಾರರು ಸಹ ನಮ್ಮ ವೇದಿಕೆಯತ್ತ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಂಟೆಂಟ್ ಟ್ರಾಫಿಕ್ ಸಹ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದಾರೆ.

ಭಾರತದ 10 ಭಾಷೆಗಳಲ್ಲಿ ಟಿಕ್‍ಟಾಕ್ ಆ್ಯಪ್ ಲಭ್ಯವಿದೆ. ಟಿಕ್‍ಟಾಕ್ ಆ್ಯಪ್ ತಪ್ಪು ರೀತಿಯಲ್ಲಿ ಬಳಕೆಯಾಗುತ್ತಿರೋದನ್ನು ಗಮನಕ್ಕೆ ಬಂದಿದ್ದು, ನಿಯಂತ್ರಣ ಕಾರ್ಯ ಸಹ ನಡೆದಿದೆ. ಸುರಕ್ಷಿತ ಮತ್ತು ಸಕಾರತ್ಮಕ ವಿಚಾರಗಳನ್ನು ಬಳಕೆದಾರರಿಗೆ ನೀಡುವ ಉದ್ದೇಶದಿಂದ ಜುಲೈ 2018ರಿಂದ ಇಂದಿನವರೆಗಿನ 60 ಲಕ್ಷ ವಿಡಿಯೋಗಳನ್ನು ತೆಗೆಯಲಾಗಿದೆ ಎಂದು ಸಚಿನ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *