ಟಿಕ್‍ಟಾಕ್‍ನಿಂದ ಪತಿಯ 2ನೇ ಮದುವೆ ರಹಸ್ಯ ಬಯಲು

– ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಹೈದರಾಬಾದ್: ಮನರಂಜನೆಗಾಗಿ ಆರಂಭವಾದ ಟಿಕ್ ಟಾಕ್ ಎಂಬ ಆ್ಯಪ್ ಬಳಕೆ ಸದ್ಯ ಹಲವರಿಗೆ ವ್ಯಸನವಾಗಿದ್ದು, ಯುವಕ, ಯುವತಿಯರು ಸೇರಿದಂತೆ ಯುವ ಜನಾಂಗ ಟಿಕ್ ಟಾಕ್‍ಗೆ ಮರುಳಾಗುತ್ತಿದೆ. ಸದ್ಯ ಟಿಕ್ ಟಾಕ್‍ನಲ್ಲಿ ಬಂದ ವಿಡಿಯೋವೊಂದು ವ್ಯಕ್ತಿಯೊಬ್ಬ ತನ್ನ ಮೊದಲ ಪತ್ನಿಗೆ ತಿಳಿಯದಂತೆ 2ನೇ ಮದುವೆಯಾಗಿದ್ದ ಸಂಗತಿಯನ್ನು ಬಹಿರಂಗ ಪಡಿಸಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ವಿಜಯವಾಡ ನಗರದ ನಿವಾಸಿಗಳಾದ ಅನುರಾಧ ಅವರು 7 ವರ್ಷಗಳ ಹಿಂದೆ ಸತ್ಯರಾಜ್‍ರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಸಂತೋಷದದಿಂದಲೇ ಜೀವನ ನಡೆಸುತ್ತಿದ್ದ ದಂಪತಿಗೆ 7 ವರ್ಷವಾದರೂ ಮಕ್ಕಳು ಜನಿಸಿರಲಿಲ್ಲ. ಇದರಿಂದ ಪತಿ ಹಾಗೂ ಅವರ ಕುಟುಂಬಸ್ಥರು ಅನುರಾಧ ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಅನುರಾಧ ಅವರ ಮೊಬೈಲ್‍ಗೆ ಟಿಕ್‍ಟಾಕ್‍ನಲ್ಲಿ ಪತಿಯ ವಿಡಿಯೋವೊಂದನ್ನು ಬಂದಿತ್ತು.

ವಿಡಿಯೋದಲ್ಲಿ ಪತಿ ಬೇರೆ ಹೆಣ್ಣಿನೊಂದಿಗೆ ಸನಿಹದಿಂದ ಇರುವುದು ಕಂಡು ಬಂದಿತ್ತು. ವಿಡಿಯೋ ನೋಡಿದ ಬಳಿಕ ಈ ಬಗ್ಗೆ ಪ್ರಶ್ನಿಸಿದ ಅನುರಾಧಗೆ ಪತಿ ಹೈದರಾಬಾದ್‍ಗೆ ಸೇರಿದ ಯುವತಿಯೊಂದಿಗೆ ತಿರುಪತಿಯಲ್ಲಿ 2ನೇ ಮದುವೆಯಾಗಿ ಬೇರೊಂದು ಸಂಸಾರ ನಡೆಸುತ್ತಿದ್ದಿದ್ದು ತಿಳಿದು ಬಂದಿತ್ತು. ಅಲ್ಲದೆ ಈ ಇಬ್ಬರು ಟಿಕ್ ಟಾಕ್ ಮೂಲಕವೇ ಪರಿಚಯವಾಗಿದ್ದ ಸಂಗತಿ ಕೂಡ ಬೆಳಕಿಗೆ ಬಂದಿತ್ತು.

ಪತಿಯ 2ನೇ ಮದುವೆ ಗುಟ್ಟು ರಟ್ಟಾಗುತ್ತಿದಂತೆಯೇ ಅನುರಾಧ ಕುಟುಂಬದ ಹಿರಿಯರಿಗೆ ತಿಳಿಸಿದ್ದರು. ಆದರೆ ಆ ವೇಳೆ ತಾನು ಮಾಡಿದ್ದು ತಪ್ಪು ಎಂದು 2ನೇ ಪತ್ನಿಯನ್ನು ಬಿಟ್ಟು ಬರುವುದಾಗಿ ಸತ್ಯರಾಜ್ ಒಪ್ಪಿಕೊಂಡು, ಮುಂದಿನ ದಿನಗಳಲ್ಲಿ ಇಂತಹ ಕೆಲಸ ಮಾಡಲ್ಲ ಎಂದು ಹೇಳಿದ್ದ. ಆದರೆ ಆ ಬಳಿಕ ನಿತ್ಯ ಅನುರಾಧರಿಗೆ ದೈಹಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದ್ದ. ಪತಿಯ ಈ ಕಿರುಕುಳವನ್ನು ಸಹಿಸಲು ಸಾಧ್ಯವಾಗದ ಅನುರಾಧ ಸದ್ಯ ಇಬ್ರಾಹೀಂ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *