ಹುಲಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಸೇಡು ತೀರಿಸಿಕೊಂಡ ಗ್ರಾಮಸ್ಥರು

ಲಕ್ನೋ: 50 ವರ್ಷದ ವ್ಯಕ್ತಿಯನ್ನು ಕೊಂದು ಹಾಕಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಹುಲಿಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ದುಧ್ವಾ ಹುಲಿ ಅಭಯಾರಣ್ಯ ಪ್ರದೇಶದಲ್ಲಿ ನಡೆದಿದೆ.

ಈ ಘಟನೆ ಭಾನುವಾರ ನಡೆದಿದ್ದು, ದುಧ್ವಾ ಹುಲಿ ಅಭಯಾರಣ್ಯ ಉಪನಿರ್ದೇಶಕ ಮಹಾವೀರ್ ಕೌಜಲಗಿ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಗ್ರಾಮಸ್ಥರು ರೊಚ್ಚಿಗೆದ್ದು ಹುಲಿಯನ್ನು ಕೊಂದಿದ್ದಾರೆ ಎಂದು ತಿಳಿಸಿದ್ದಾರೆ.

ನಾವೆಲ್ಲರೂ ಹುಲಿಯಿಂದ ದಾಳಿಗೆ ಒಳಗಾಗಿದ್ದ 50 ವರ್ಷದ ದೇವಾನಂದ್ ಅವರನ್ನು ಪ್ರಾಣಪಾಯದಿಂದ ರಕ್ಷಿಸಲು ಆಸ್ಪತ್ರೆಗೆ ದಾಖಲಿಸುವಲ್ಲಿ ಕಾರ್ಯನಿರತರಾಗಿದ್ದರೆ ಗ್ರಾಮಸ್ಥರು ಸುತ್ತುವರಿದು ಆ ಹುಲಿಯ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಂದಿದ್ದಾರೆ ಎಂದು ಹೇಳಿದರು.

ಹುಲಿಯನ್ನು ಹತ್ಯೆ ಮಾಡುವಲ್ಲಿ ಯಾರೆಲ್ಲಾ ಭಾಗಿಯಾದ್ದರೋ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅಷ್ಟೇ ಅಲ್ಲದೇ ಸಂರಕ್ಷಿತ ಪ್ರದೇಶದೊಳಗೆ ಹುಲಿ ಹತ್ಯೆ ಮಾಡುವುದು ಗಂಭೀರ ಅಪರಾಧವಾಗಿದೆ. ಹೀಗಾಗಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ನಿರ್ದೇಶಕ ರಮೇಶ್ ಕುಮಾರ್ ಪಾಂಡೆ ಅವರು ಹೇಳಿದ್ದಾರೆ.

ಘಟನೆಯ ಬಳಿಕ ಹುಲಿಯ ಮೃತ ದೇಹವನ್ನು ಪಡೆಯಲಾಗಿದ್ದು, ಸೋಮವಾರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ಶವಪರೀಕ್ಷೆಯನ್ನು ಕೈಗೊಳ್ಳಲಾಗುವುದು ಎಂದು ಕೌಜಲಗಿ ತಿಳಿಸಿದ್ದಾರೆ.

ಇದೇ ರೀತಿ ಮಹಾರಾಷ್ಟ್ರದಲ್ಲಿ 14 ಮಂದಿಯನ್ನು ಕೊಂದಿದ್ದ ಅವನಿ ಎಂಬ ಹೆಣ್ಣು ಹುಲಿಯನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಯಾದ ಎರಡು ದಿನದ ಬಳಿಕವೇ ದುಧ್ವಾ ಹುಲಿ ಅಭಯಾರಣ್ಯದಲ್ಲಿ ಈ ಘಟನೆ ಸಂಭವಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *