ಹೊಸಪೇಟೆಯ ತುಂಗಭದ್ರಾ ಸ್ಟೀಲ್ ಫ್ಯಾಕ್ಟರಿ ಇನ್ನು ನೆನಪು ಮಾತ್ರ

ಬಳ್ಳಾರಿ: ಉದ್ಯೋಗ ಸೃಷ್ಠಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಕಾರ್ಖಾನೆಗಳ ಸ್ಥಾಪನೆಗೆ ಅವಕಾಶ ನೀಡುತ್ತೆ. ಆದ್ರೆ ಸ್ವಂತ ಕೇಂದ್ರ ಸರ್ಕಾರಿ ಸ್ವಾಮ್ಯದ ಉಕ್ಕಿನ ಕಾರ್ಖಾನೆಗೇ ಇದೀಗ ಕೇಂದ್ರ ಸರ್ಕಾರ ಬೀಗ ಜಡಿದಿದೆ. ಹೌದು, ಆರ್ಥಿಕ ಮುಗ್ಗಟ್ಟಿನಿಂದ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಸ್ಟೀಲ್ ಫ್ಯಾಕ್ಟರಿಗೆ ಬೀಗ ಬಿದ್ದಿದೆ.

ತುಂಗಭದ್ರಾ ಜಲಾಶಯ ಸ್ಥಾಪನೆಗೂ ಮುನ್ನ ಅಂದ್ರೆ 1948ರಲ್ಲಿ ಆರಂಭವಾದ ತುಂಗಭದ್ರಾ ಸ್ಟೀಲ್ ಫ್ಯಾಕ್ಟರಿಯಲ್ಲಿ ಇದುವರೆಗೂ ಜಲಾಶಯದ ಕ್ರಸ್ಟ್ ಗ್ರೇಟ್ ಹಾಗೂ ಉಕ್ಕಿನ ವಸ್ತುಗಳನ್ನು ತಯಾರಿಸಲಾಗುತ್ತಿತ್ತು. ಆದ್ರೆ ಇನ್ಮುಂದೆ ಈ ಉಕ್ಕಿನ ಕಾರ್ಖಾನೆ ಅಕ್ಷರಶಃ ನೆನಪು ಮಾತ್ರ.

ಆರ್ಥಿಕ ಮುಗ್ಗಟ್ಟು ಹಾಗೂ ಅದಿರು ಸರಬರಾಜಿನ ಕೊರೆತೆಯ ನೆಪವೊಡ್ಡಿ ಕೇಂದ್ರ ಸರ್ಕಾರ ಅತ್ಯಂತ ಹಳೆಯದಾದ ಈ ಕಾರ್ಖಾನೆಯನ್ನು ಮುಚ್ಚಲು ಆದೇಶ ನೀಡುವ ಮೂಲಕ ಕಾರ್ಖಾನೆಗೆ ಬೀಗ ಜಡಿದಿದೆ. ಆದ್ರೆ ಖಾಸಗಿ ಅದಿರು ಕಂಪನಿಗಳ ಲಾಭಿಗೆ ಮಣಿದು ಕೇಂದ್ರ ಸರ್ಕಾರ ತುಂಗಭದ್ರಾ ಸ್ಟೀಲ್ ಕಾರ್ಖಾನೆಗೆ ಬೀಗ ಬಿಳುವಂತೆ ಮಾಡಿದೆ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಈ ತುಂಗಭದ್ರಾ ಸ್ಟೀಲ್ ಕಾರ್ಖಾನೆಯಲ್ಲಿ ಕೇಂದ್ರ ಸರ್ಕಾರದ ಶೇಕಡಾ 79ರಷ್ಟು ಶೇರು ಹಣವಿದೆ. ಇನ್ನುಳಿದಂತೆ ಶೇಕಡಾ 12ರಷ್ಟು ಆಂಧ್ರಪ್ರದೇಶ ಮತ್ತು 9ರಷ್ಟು ರಾಜ್ಯದ ಪಾಲಿದೆ. ಅಲ್ಲದೇ ಉಕ್ಕಿನ ನಗರಿ, ಅದಿರಿನ ಕಣಜವೆಂದು ಕರೆಯುವ ಗಣಿನಾಡಿನಲ್ಲೇ ಈ ಸರ್ಕಾರಿ ಸ್ವಾಮ್ಯದ ಸ್ಟೀಲ್ ಕಾರ್ಖಾನೆಗೆ ಸರಿಯಾಗಿ ಅದಿರು ಸಿಗದ ಪರಿಣಾಮ ಈ ಕಾರ್ಖಾನೆ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಯ್ತು. ಹೀಗಾಗಿ ಕಾರ್ಖಾನೆ ಮುಚ್ಚುತ್ತೆ ಅನ್ನೋ ಭಯದಿಂದ ಈಗಾಗಲೇ 350ಕ್ಕೂ ಹೆಚ್ಚು ನೌಕರರು ಸ್ವಯಂ ನಿವೃತ್ತಿ ಪಡೆದಿದ್ದಾರೆ.

ಅಲ್ಲದೇ ಕಾರ್ಖಾನೆಗೆ ಸೇರಿದ 83 ಎಕರೆ ಜಾಗವನ್ನು ಈಗಾಗಲೇ ಹೌಸಿಂಗ್ ಬೋರ್ಡ್ ಗೆ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ನೌಕರರು ಇದೀಗ ಬೀದಿಗೆ ಬೀಳುವಂತಾಗಿದೆ.

ದೀಪದ ಕೆಳಗೆ ಕತ್ತಲು ಎನ್ನುವಂತೆ ಗಣಿ ನಾಡಿನಲ್ಲೇ ಕೇಂದ್ರ ಸರ್ಕಾರಿ ಸ್ವಾಮ್ಯದ ಉಕ್ಕಿನ ಕಾರ್ಖಾನೆಗೆ ಅದಿರು ಸಿಗದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.

Comments

Leave a Reply

Your email address will not be published. Required fields are marked *