ಒಂದೇ ದಿನ ಮೂವರು ಗರ್ಭಿಣಿಯರು ಸಾವು – ಇನ್ನೂ ಬಳ್ಳಾರಿಗೆ ಮುಖ ಮಾಡದ ಜಮೀರ್‌

– ಮೂವರು ಗರ್ಭಿಣಿಯರು ಸಾವು, ಐಸಿಯುನಲ್ಲಿ ನಾಲ್ವರಿಗೆ ಚಿಕಿತ್ಸೆ
– ಚುನಾವಣಾ ಪ್ರಚಾರದಲ್ಲಿ ಜಮೀರ್‌ ಬ್ಯುಸಿ

ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ (Ballari District Hospital) ಮೂವರು ಬಾಣಂತಿಯರ ಸರಣಿ ಸಾವು ಇಡೀ ಜಿಲ್ಲೆಯ ಜನರ ನಿದ್ದೆಗೆಡಿಸಿದೆ. ಅಷ್ಟೇ ಅಲ್ಲದೇ ಸರ್ಕಾರಿ ಆಸ್ಪತ್ರೆಗಳ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ದೊಡ್ಡ ದುರಂತ ನಡೆದರೂ ಇನ್ನೂ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಜಿಲ್ಲೆಯ ಕಡೆ ಮುಖ ಮಾಡಿಲ್ಲ.

ನ.9 ರಂದು ಹೆರಿಗೆಗೆ ಬಂದಿದ್ದ ಏಳು ಗರ್ಭಿಣಿಯರು ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ (Ballari District Hospital) ಸಿಸೇರಿಯನ್‌ಗೆ ಒಳಗಾಗಿದ್ದರು. ನ.10 ರಂದು ನಂದಿನಿ ಮತ್ತು ಲಲಿತಮ್ಮ ಸಾವನ್ನಪ್ಪಿದ್ದರೆ ನ.13 ರಂದು ರೋಜಮ್ಮ ಮೃತಪಟ್ಟಿದ್ದರು. ಉಳಿದ ನಾಲ್ವರು ಬಾಣಂತಿಯರು ಬಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಮೃತರಾದ ಬಾಣಂತಿಯರು
ಜಿಲ್ಲಾಸ್ಪತ್ರೆಯಲ್ಲಿ ಮೃತರಾದ ಬಾಣಂತಿಯರು

ಈ ಘಟನೆಯ ಬಗ್ಗೆ ಕೇವಲ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎನ್ನುವ ಸಂದೇಶವನ್ನು ಮಾತ್ರ ಜಮೀರ್‌ ಕಳುಹಿಸಿದ್ದಾರೆ. ಆದರೆ ಇಲ್ಲಿ ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಏನು? ಈ ಅವಘಡಕ್ಕೆ ಕಾರಣ ಏನು? ಯಾಕಾಯ್ತು ಎನ್ನುವುದರ ಬಗ್ಗೆ ಆತ್ಮಾವಲೋಕನ ಮಾಡಿಯೇ ಇಲ್ಲ.

ಕರ್ನಾಟಕ ಉಪಚುನಾವಣೆಯ (Karnataka By Election) ಬಳಿಕ ಸದ್ಯ ಮಹಾರಾಷ್ಟ್ರ ಚುನಾವಣೆಯಲ್ಲಿ ಸಚಿವ ಜಮೀರ್ ಫುಲ್‌ ಬ್ಯುಸಿಯಾಗಿದ್ದಾರೆ. ಹೀಗಾಗಿ ಸಚಿವರಿಗೆ ಜನರ ಹಿತಕ್ಕಿಂತ ಚುನಾವಣೆಯೇ ಹೆಚ್ಚಾಗಿದ್ದಕ್ಕೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ರಸ್ತೆ ಅಗಲೀಕರಣಕ್ಕಾಗಿ 70ಕ್ಕೂ ಹೆಚ್ಚು ಮನೆಗಳ ನೆಲಸಮ – ನೋಟಿಸ್‌ ನೀಡದೆ ತೆರವು ಆರೋಪ

 

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ತನಿಖಾ ತಂಡ ರಚಿಸಿ ತನಿಖೆಗೆ ಆದೇಶಿಸಿತ್ತು. ಡಾ. ಸವಿತಾ ಸಿ, ಡಾ.ಭಾಸ್ಕರ್ ಬಿ, ಡಾ. ಹರ್ಷಾ ಟಿಆರ್ ಅವರನ್ನು ಒಳಗೊಂಡಿರುವ ತನಿಖಾ ತಂಡ ಈಗಾಗಲೇ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ತನಿಖೆ ಮುಕ್ತಾಯಗೊಳಿಸಿದ್ದು, ಕೆಲವೊಂದು ಲ್ಯಾಬ್ ವರದಿಗೆ ಕಾಯುತ್ತಿದೆ. ಹೀಗಾಗಿ ಇಂದು ಬಹುತೇಕ ಎಲ್ಲಾ ದಾಖಲೆಗಳು ಕೈ ಸೇರುವ ಸಾಧ್ಯತೆ ಇದ್ದು ಇಂದೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಿದ್ದಾರೆ.

ಸಾವಿಗೆ ಕಾರಣ ಏನು?
ಮೂವರು ತಾಯಂದಿರ ಸಾವಿಗೆ ಅಸಲಿ ಕಾರಣ ಇನ್ನೂ ತಿಳಿದು ಬಾರದೇ ಇದ್ದರೂ ಮೇಲ್ನೋಟಕ್ಕೆ ಇದು ಮೆಡಿಕಲ್ ರಿಯಾಕ್ಷನ್ ಎನ್ನುವ ಅನುಮಾನ ಶುರುವಾಗಿದೆ. ಮೂವರ ಸಾವಿಗೆ IV Fluid ಔಷಧಿಯೇ ಕಾರಣ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಯಾಕೆಂದರೆ ಸಿಸೇರಿಯನ್ ಬಳಿಕ ವೈದ್ಯರು ಐವಿ ಫ್ಲೂಯಿಡ್ ಹಾಗೂ ಎನ್‌ಎಸ್‌ಎಲ್‌ ಗ್ಲುಕೋಸ್‌ ಹಾಕಿದ್ದರು. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ(KSMSCL) ಕಳುಹಿಸಿದ್ದ ಗ್ಲುಕೋಸ್‌ಗಳನ್ನು ನ. 9 ರಂದು ಹಾಕಲಾಗಿತ್ತು. ಆ ಬಳಿಕ ಬಾಣಂತಿಯರ ಆರೋಗ್ಯದಲ್ಲಿ ಏಕಾಏಕಿ ಏರುಪೇರಾಗಿ ನ.10 ರಂದು ನಂದಿನಿ ಹಾಗೂ ಲಲಿತಮ್ಮ ಮೃತಪಟ್ಟಿದ್ದರು. ಕೂಡಲೇ ಇನ್ನುಳಿದ ಐದು ಬಾಣಂತಿಯರನ್ನು ಬಿಮ್ಸ್‌ಗೆ ರವಾನೆ ಮಾಡಲಾಗಿತ್ತು.