ಉಡುಪಿ: ಒಂದು ಹೆಬ್ಬಾವನ್ನು ಕಂಡರೆ ಜನ ಬೆಚ್ಚಿ ಬೀಳುತ್ತಾರೆ. ಎರಡೆರಡು ಹೆಬ್ಬಾವೆಲ್ಲಾದರೂ ಕಾಣ ಸಿಕ್ಕಿದ್ರೆ ಎದ್ದು ಬಿದ್ದು ಜನ ಓಡಿ ಹೋಗುತ್ತಾರೆ. ಆದ್ರೆ ಉಡುಪಿಯಲ್ಲಿ ಮೂರು ಹೆಬ್ಬಾವು ಒಂದೇ ಕಡೆ ಕಾಣಿಸಿಕೊಂಡಿದ್ದು ಸುತ್ತಮುತ್ತಲ ಜನ ದಂಗಾಗಿದ್ದಾರೆ.
ಉಡುಪಿಯ ಮಲ್ಪೆ ಸಮೀಪದ ಪಂದುಬೆಟ್ಟು ಎಂಬಲ್ಲಿ ಹೈರುನ್ನಿಸ್ಸಾ ಎಂಬವರು ಸೌದೆ ಕೂಡಿಡಲು ಒಂದು ಕೊಟ್ಟಿಗೆ ಕಟ್ಟಿಕೊಂಡಿದ್ದಾರೆ. ಒಲೆ ಉರಿಸಲು ಸೌದೆ ತರಲು ಹೋದ ಅವರಿಗೆ ದೊಡ್ಡ ಗಾತ್ರದ ಹೆಬ್ಬಾವೊಂದು ಸುತ್ತಿಕೊಂಡು ಮಲಗಿರುವುದು ಕಂಡಿದೆ. ಹಾವು ಕಂಡು ಭಯಗೊಂಡ ಅವರು ಸುತ್ತಮುತ್ತಲ ಮನೆಯವರಿಗೆ ಹೇಳಿದ್ದಾರೆ.

ಕೆಲ ಯುವಕರು ಬಂದು ಹಾವು ಹಿಡಿಯಲು ಪ್ರಯತ್ನಿಸಿದರು. ಒಂದು ಹಾವನ್ನು ಹಿಡಿಯುವಷ್ಟರಲ್ಲಿ ಮತ್ತೊಂದು ಹಾವು ಕಾಣಿಸಿಕೊಂಡಿದೆ. ಆಗ ಸ್ಥಳೀಯ ಯುವಕರು ಉರಗ ತಜ್ಞ ಗುರುರಾಜ್ ಅವರಿಗೆ ಫೋನ್ ಮಾಡಿದ್ದಾರೆ. ಗುರುರಾಜ್ ಹಾವು ಹಿಡಿಯುವ ಹತ್ಯಾರ್ ಹಿಡಿದು ಬಂದು ತಪ್ಪಿಸಿಕೊಂಡು ಹೋಗಿದ್ದ ಮೊದಲ ಮತ್ತು ಎರಡನೇ ಹಾವನ್ನು ಹಿಡಿದಿದ್ದಾರೆ. ಅಷ್ಟೊತ್ತಿಗೆ ಮತ್ತೊಂದು ಹೆಬ್ಬಾವು ಬಿಲದೊಳಗೆ ಅವಿತು ಕುಳಿತಿರುವುದು ಕಾಣಿಸಿದೆ. ಬಿಲವನ್ನು ಮೇಲ್ಬಾಗದಿಂದ ತೆರೆದಾಗ ಹಾವು ಭೂಮಿಯೊಳಗೆ ಹೋಗಲು ಪ್ರಯತ್ನಿಸಿದೆ. ಚಾಕ ಚಕ್ಯತೆಯಿಂದ ಹಿಡಿದ ಗುರುರಾಜ್ ಸನಿಲ್ ಎಲ್ಲಾ ಮೂರು ಹಾವನ್ನು ಹೊರತಂದು ಸಾರ್ವಜನಿಕರ ಆತಂಕ ದೂರ ಮಾಡಿದ್ದಾರೆ.
ಡಿಸೆಂಬರ್ ನಿಂದ ಫೆಬ್ರವರಿ ತಿಂಗಳವರೆಗೆ ಹಾವುಗಳದ್ದು ಮಿಲನಕಾಲ. ಒಂದಕ್ಕಿಂತ ಹೆಚ್ಚು ಹೆಬ್ಬಾವುಗಳು ಹೆಣ್ಣು ಹೆಬ್ಬಾವಿನ ಜೊತೆ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ. ಹೆಚ್ಚು ಹೆಬ್ಬಾವುಗಳು ಒಂದೆಡೆ ಕಾಣಿಸಿಕೊಂಡರೆ ಸಾರ್ವಜನಿಕರು ಭಯಪಡಬೇಡಿ ಅಂತ ಉರಗತಜ್ಞ ಗುರುರಾಜ್ ಹೇಳಿದ್ದಾರೆ. ಹೆಬ್ಬಾವುಗಳನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬಿಡಲಾಗುವುದು ಅಂತ ಅರಣ್ಯಾಧಿಕಾರಿಗಳು ಹೇಳಿದ್ದಾರೆ.
https://youtu.be/nEBFCQO2hQE






Leave a Reply