ಸಿಂಹಗಳನ್ನೇ ಬೆನ್ನಟ್ಟಿದ ಮೂವರು ಯುವಕರು..!

ಗಾಂಧಿನಗರ: ಮೂವರು ಯುವಕರು ಸಿಂಹಗಳನ್ನು ಬೆದರಿಸಿ ಅವುಗಳನ್ನು ಬೆನ್ನಟ್ಟಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಅಮ್ರೆಲಿ ಜಿಲ್ಲೆಯ ಲಿಲ್ಯಾ ತಾಲೂಕಿನ ಪ್ರದೇಶವೊಂದರಲ್ಲಿ ಸೆರೆ ಹಿಡಿಯಲಾಗಿದೆ ಅಂತ ಅರಣ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ವಿಡಿಯೋದಲ್ಲೇನಿದೆ..?
ಇಬ್ಬರು ಬೈಕ್ ನಲ್ಲಿ ಕುಳಿತಿದ್ದು, ಹಿಂಬದಿ ಸವಾರ ಮೊಬೈಲ್ ಕ್ಯಾಮೆರಾ ಆನ್ ಮಾಡಿಟ್ಟುಕೊಂಡಿದ್ದಾನೆ. ಮತ್ತೊಬ್ಬ ಬೈಕ್ ನಲ್ಲಿ ಕುಳಿತಿರೋ ತನ್ನ ಸ್ನೇಹಿತರ ಜೊತೆಯೇ ತಾನೂ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಓಡುತ್ತಿದ್ದಾನೆ. ಈ ಮೂವರು ಸುಮಾರು 5 ಸಿಂಹಗಳನ್ನು ಬೆದರಿಸಿ ಮಣ್ಣಿನ ರೋಡ್ ನಲ್ಲಿ ಬೆನ್ನಟ್ಟಿದ್ದಾರೆ.

ಸಿಂಹಗಳು ಓಡುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಇದರ ಹಿಂದೆಯೇ ಈ ಮೂವರು ಅವುಗಳು ಓಡುತ್ತಿರುವ ದೃಶ್ಯವನ್ನು ಸೆರೆಹಿಡಿಯುತ್ತಿರುವುದು ಕಂಡುಬರುತ್ತದೆ. ಆದ್ರೆ ಈ ಮೂವರ ವಿಡಿಯೋ ಮಾಡಿರುವುದು ಯಾರು ಅಂತ ತಿಳಿದುಬಂದಿಲ್ಲ.

“ವೈರಲ್ ಆಗಿರೋ ವಿಡಿಯೋ ಬಗ್ಗೆ ನಮಗೆ ಸೋಮವಾರ ಸಂಜೆ ಮಾಹಿತಿ ಬಂದಿದೆ. ಈ ಕುರಿತು ತನಿಖೆ ನಡೆಸಿ ಮೂವರನ್ನು ಗುರುತಿಸಿ, ಶೀಘ್ರವೇ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಆರ್ ಟಿಓ ಮೂಲಕ ಬೈಕ್ ನಂಬರನ್ನು ಕಲೆ ಹಾಕಿದ್ದು, ಕೂಡಲೇ ಯುವಕರನ್ನು ಟ್ರ್ಯಾಕ್ ಮಾಡುತ್ತೇವೆ” ಅಂತ ಘಟನೆಯ ಕುರಿತು ಅರಣ್ಯಾಧಿಕಾರಿ ಎ ಸಿ ಪಟೇಲ್ ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಸಿಂಹಗಳನ್ನು ಓಡಿಸಿ ಹೀರೋ ಆಗಲು ಹೊರಟಿದ್ದ ಮೂವರನ್ನು ಬಂಧಿಸಲಾಗಿತ್ತು. ಗಿರ್ ಅಭಯಾರಣ್ಯದಲ್ಲಿ ಬೈಕ್ ನಲ್ಲಿ ಸಿಂಹಗಳನ್ನು ಬೆದರಿಸಿ ಬೆನ್ನಟ್ಟಿದ್ದ ಅವಿವೇಕಿ ಯುವಕರ ಪೈಕಿ ಮೂವರನ್ನು ರಾಜ್ ಕೋಟ್ ನಲ್ಲಿ ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಅಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಮದಿದೆ.

ಅಮ್ರೇಲಿ ಜಿಲ್ಲೆ ಒಂದರಲ್ಲೇ ಸರಿ ಸುಮಾರು 100 ಸಿಂಹಗಳಿವೆ ಎಂಬುದಾಗಿ ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *