ಮಿನಿ ಬಸ್ಸಿಗೆ ಹಿಂದಿನಿಂದ ಲಾರಿ ಡಿಕ್ಕಿ – ಮೂವರ ದುರ್ಮರಣ, 18 ಮಂದಿಗೆ ಗಾಯ

ಹಾವೇರಿ: ಚಲಿಸುತ್ತಿದ್ದ ಮಿನಿ ಬಸ್ಸಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಹದಿನೆಂಟು ಜನರು ಗಾಯಗೊಂಡ ಘಟನೆ ಹಾವೇರಿ ನಗರದ ಹೊರವಲಯದಲ್ಲಿರುವ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ.

ಮೃತರನ್ನ ರಬ್ಬಾನಿ (45), ಖಾದರ್ (50) ಮತ್ತು ಶಬ್ಬೀರ್(42) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಮತ್ತು ಗಾಯಾಳುಗಳು ಎಲ್ಲರೂ ಸವಣೂರು ಪಟ್ಟಣದವರು ಎನ್ನಲಾಗಿದೆ.

ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಬುಧವಾರ ರಾತ್ರಿ ಗಲೀಫ ಉರುಸ್ ಮುಗಿಸಿಕೊಂಡು ಸವಣೂರು ಪಟ್ಟಣದತ್ತ ಮಿನಿ ಬಸ್ ತೆರಳುತ್ತಿತ್ತು. ಬೆಳಗಿನ ಜಾವ ಸುಮಾರು 3.50ಕ್ಕೆ ಲಾರಿ ಹುಬ್ಬಳ್ಳಿಯತ್ತ ಎಳನೀರು ತುಂಬಿಕೊಂಡು ಹೋಗುತ್ತಿತ್ತು. ಈ ವೇಳೆ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಮಿನಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಎಸ್‍ಪಿ ಪರಶುರಾಮ, ಎಎಸ್‍ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಂತರ ಚಾಲಕ ಲಾರಿ ಬಿಟ್ಟು ಪರಾರಿ ಆಗಿದ್ದಾನೆ. ಈ ಸಂಬಂಧ ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *