ಗುಡಿಸಲಿನಲ್ಲಿ ಆಡುತ್ತಿದ್ದ ಮೂವರು ಬಾಲಕಿಯರು ಸಜೀವ ದಹನ

ಭುವನೇಶ್ವರ: ಭತ್ತದ ಪೈರಿನ ಕೂಳೆ ತುಂಬಿದ್ದ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅದರೊಳಗೆ ಆಟವಾಡುತ್ತಿದ್ದ ಮೂವರು ಬಾಲಕಿಯರು ಸಾವನ್ನಪ್ಪಿದ ದುರಂತ ಘಟನೆ ಒಡಿಶಾದಲ್ಲಿ ನಡೆದಿದೆ.

ಶನಿವಾರ ಕಲಹಂಡಿ ಜಿಲ್ಲೆಯ ಬಿಜ್ಮಾರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು 4 ವರ್ಷದ ದಾಜಿ ದಿಶಾರಿ, ರಾಜಿ ದಿಶಾರಿ ಹಾಗೂ ರಚನಾ ರೌತ್ ಎಂದು ಗುರುತಿಸಲಾಗಿದೆ. ದಾಜಿ ಹಾಗೂ ರಾಜಿ ಅವಳಿ ಜವಳಿ ಸಹೋದರಿಯರು. ಮೂವರು ಬಾಲಕಿಯರು ಭತ್ತದ ಪೈರಿನ ಕೂಳೆ ತುಂಬಿಟ್ಟಿದ್ದ ಗುಡಿಸಲಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಹೊತ್ತಿಹೊಂಡಿದ್ದು, ಗುಡಿಸಲ ಒಳಗಿದ್ದ ಮೂವರು ಬಾಲಕಿಯರು ಬೆಂಕಿ ಕೆನ್ನಾಲಿಗೆಯಲ್ಲಿ ಸುಟ್ಟು ಸಾವನ್ನಪ್ಪಿದ್ದಾರೆ.

ಗ್ರಾಮದ ಮಹಿಳೆಯೊಬ್ಬರು ಈ ಬಗ್ಗೆ ಮಾತನಾಡಿ, ಗುಡಿಸಲ ಸುತ್ತಮುತ್ತಲು ಚಳಿ ಕಾಯಿಸಲು ಕೆಲವರು ಕಲ್ಲಿದ್ದಲು ಸುಡುತ್ತಿದ್ದರು. ಬಹುಶಃ ಅದರ ಕಿಡಿ ಗುಡಿಸಲಿಗೆ ತಗಲಿ ಬೆಂಕಿ ಹೊತ್ತಿಕೊಂಡಿರಬೇಕು. ಗುಡಿಸಲಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಾಲಕಿಯರಿಗೆ ಅಲ್ಲಿಂದ ಹೊರಬರಲು ಆಗಲಿಲ್ಲ. ಮಕ್ಕಳ ಕಿರುಚಾಟ ಕೇಳಿ ಸ್ಥಳಿಯರು ಹೋಗಿ ಬೆಂಕಿ ನಂದಿಸುವಷ್ಟರಲ್ಲಿ ಗುಡಿಸಲು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.

ತಕ್ಷಣ ಬಾಲಕಿಯರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಗ್ನಿ ಅವಘಡದಲ್ಲಿ ಬಾಲಕಿಯರ ಶೇ.90ರಷ್ಟು ದೇಹದ ಭಾಗವು ಸುಟ್ಟು ಹೋಗಿತ್ತು. ನಾವು ಅವರನ್ನು ಉಳಿಸಲು ಪ್ರಯತ್ನಿಸಿದೆವು, ಆದರೆ ಚಿಕಿತ್ಸೆ ನೀಡಿದ 1 ಗಂಟೆ ಬಳಿಕ ಮೂವರು ಬಾಲಕಿಯರು ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ.

ಬಾಲಕಿಯರ ಹೆತ್ತವರು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಇತ್ತ ಮಕ್ಕಳು ಗುಡಿಸಲಿನಲ್ಲಿ ಆಟವಾಡುತ್ತಿದ್ದರು. ಆದರೆ ಈ ರೀತಿ ದುರಂತ ಸಂಭವಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ಮೃತ ಬಾಲಕಿಯರ ಅಜ್ಜ ಕಣ್ಣಿರಿಟ್ಟಿದ್ದಾರೆ.

ಸದ್ಯ ಈ ಬಗ್ಗೆ ಮಾಹಿತಿ ತಿಳಿದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಲ್ಲದೆ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *