ಅಂಗಲಾಚಿ ಬೇಡಿದರೂ ಬಿಡದ ಕಾಮುಕರು, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ!

ಲಕ್ನೋ: ಮಹಿಳೆಯ ಮೇಲೆ ಮೂವರು ಕಾಮುಕರು ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಗಂಗಾಘಾಟ್ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಉನ್ನಾವೋ ಜಿಲ್ಲೆಯ ಗಂಗಾಘಾಟ್ ಗ್ರಾಮದ ಮಹಿಳೆಯನ್ನು ಮೂವರು ದುಷ್ಕರ್ಮಿಗಳು ಅರಣ್ಯ ಪ್ರದೇಶದಲ್ಲಿ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅಲ್ಲದೇ ಮತ್ತೋರ್ವ ಆರೋಪಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಸೆರೆಹಿಡಿದಿದ್ದಾನೆ. ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ವಿಡಿಯೋದಲ್ಲಿ ಮಹಿಳೆಯು ತನ್ನ ಮೇಲೆ ಅತ್ಯಾಚಾರ ನಡೆಸದಂತೆ ಅವರಲ್ಲಿ `ಭಯ್ಯಾ ಐಸಾ ಮತ್ ಕರೋ'(ಅಣ್ಣಾ ಈ ರೀತಿ ಮಾಡಬೇಡಿ) ಎಂದು ಗೋಗರೆದಿದ್ದಾರೆ. ಮಹಿಳೆ ಅಂಗಲಾಚಿ ಕೇಳಿಕೊಂಡರೂ ಆ ಮೂವರು ಕಾಮುಕರು ದೌರ್ಜನ್ಯ ಮುಂದುವರಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚೆತ್ತುಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯಾದ ಅನೂಪ್ ಸಿಂಗ್, ಘಟನೆ ಸಂಬಂಧ ಇಬ್ಬರು ಆರೋಪಿಗಳಾದ ರಾಹುಲ್ ಹಾಗೂ ಆಕಾಶ್ ಎಂಬವರನ್ನು ಬಂಧಿಸಿದ್ದೇವೆ. ಅಲ್ಲದೇ ಉಳಿದ ಇಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೇ ವಿಡಿಯೋ ವೈರಲ್ ಮಾಡಿದ್ದವರ ಮೇಲೆಯೂ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯದಿಂದಲೇ ಹೆಸರುವಾಸಿಯಾಗಿದ್ದ ಉನ್ನಾವೋ ಜಿಲ್ಲೆಯಲ್ಲಿ ಮತ್ತೊಮ್ಮೆ ಲೈಂಗಿಕ ದೌರ್ಜನ್ಯ ನಡೆದಿದೆ. ಈ ಹಿಂದೆ ಉತ್ತರಪ್ರದೇಶ ಬಿಜೆಪಿ ಶಾಸಕ ಕುಲದೀಪ್ ಯಾದವ್ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಯುವತಿಯೊಬ್ಬಳು ಆರೋಪಿಸಿದ್ದಳು. ಈ ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

Comments

Leave a Reply

Your email address will not be published. Required fields are marked *