ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ – ಮೂವರು ಆರೋಪಿಗಳ ಬಂಧನ

ಮಂಗಳೂರು: ಬಂಟ್ವಾಳದಲ್ಲಿ (Bantwal) ಅಬ್ದುಲ್‌ ರಹಿಮಾನ್‌ (Abdul Rahiman) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳದ ಕುರಿಯಾಳ ನಿವಾಸಿ ದೀಪಕ್ (21), ಅಮ್ಮುಂಜೆ ನಿವಾಸಿಗಳಾದ ಪೃಥ್ವಿರಾಜ್ (21), ಚಿಂತನ್ (19) ಬಂಧಿತರು. ಕಳ್ಳಿಗೆ ಗ್ರಾಮದ ಕನಪ್ಪಾಡಿ ಎಂಬಲ್ಲಿ ಮೂವರು ಆರೋಪಿಗಳ ಬಂಧನ ಆಗಿದೆ. ಇದನ್ನೂ ಓದಿ: ಮಂಗಳೂರು| ಒತ್ತಡಕ್ಕೆ ಮಣಿದು ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹಮೀದ್‌ ರಾಜೀನಾಮೆ ಘೋಷಣೆ

ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣದಲ್ಲಿ 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಗಾಯಗೊಂಡಿದ್ದ ಕಲಂದರ್‌ ಶಫಿ ಮಾಹಿತಿ ಮೇರೆಗೆ ನಿಸಾರ್‌ ಎಂಬವರ ದೂರಿನಡಿ ಪರಿಚಯಸ್ಥರೇ ಆಗಿರುವ ದೀಪಕ್‌ ಸೇರಿ 15 ಮಂದಿ ವಿರುದ್ಧ ಎಫ್‌ಐಆರ್‌ ಆಗಿತ್ತು.

ಕುರಿಯಾಳ ಸಮೀಪದ ಇರಾಕೋಡಿಯಲ್ಲಿ ಮಂಗಳವಾರ ಇಬ್ಬರ ಮೇಲೆ ತಲ್ವಾರ್‌ನಿಂದ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ಅಬ್ದುಲ್‌ ರಹಿಮಾನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರು. ದಾಳಿಗೆ ಒಳಗಾದ ಮತ್ತೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಯುವಕರ ಜೀವಕ್ಕೆ ಬೆಲೆಯೇ ಇಲ್ಲ, ಪೂರ್ವನಿಯೋಜಿತವಾಗಿ ಕೊಲೆ: ರಿಯಾಜ್ ಕಡಂಬು ಆಕ್ರೋಶ

ದೂರಿನಲ್ಲಿ ಏನಿದೆ?
ಅಬ್ದುಲ್ ರಹೀಂ ಮತ್ತು ಕಲಂದರ್ ಶಾಫಿ ಅವರು ಹೊಳೆ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಇಳಿಸುತ್ತಿದ್ದರು. ಈ ವೇಳೆ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು 15 ಮಂದಿ ಏಕಾಏಕಿ ದಾಳಿ ನಡೆಸಿದ್ದಾರೆ.

ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು ತಲವಾರು, ಚೂರಿ, ರಾಡ್ ಗಳೊಂದಿಗೆ ಯದ್ವಾ- ತದ್ವಾ ದಾಳಿ ನಡೆಸಿದ್ದಾರೆ. ಅಲ್ಲಿದ್ದವರು ಕೂಗಾಡಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ.