ಬೆದರಿಕೆ ಕರೆ ಹಿನ್ನೆಲೆ ರಾಜ್ಯದ ಆರ್‌ಎಸ್‌ಎಸ್ ಕಚೇರಿಗಳಿಗೂ ಹೆಚ್ಚಿನ ಭದ್ರತೆ

ಬೆಂಗಳೂರು: ರಾಜ್ಯದ ಆರ್‌ಎಸ್‌ಎಸ್ ಕಚೇರಿಗಳ ಮೇಲೆ ದಾಳಿ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಎಲ್ಲಾ ಆರ್‌ಎಸ್‌ಎಸ್ ಕಚೇರಿಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಮಂಗಳವಾರ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಗೃಹ ಸಚಿವ, ಆಯಾಯ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇರುವ ಆರ್‌ಎಸ್‌ಎಸ್ ಕಚೇರಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ರಾಜ್ಯ ಪೊಲೀಸ್ ವಿಭಾಗಕ್ಕೆ ತುರ್ತು ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.

ಉತ್ತರ ಪ್ರದೇಶದ 2 ಹಾಗೂ ಕರ್ನಾಟಕದ 4 ಆರ್‌ಎಸ್‌ಎಸ್ ಕಚೇರಿಗಳನ್ನು ಧ್ವಂಸಗೊಳಿಸುವುದಾಗಿ ವಾಟ್ಸಪ್ ಸಂದೇಶವನ್ನು ತಮಿಳು ನಾಡಿನಿಂದ ವ್ಯಕ್ತಿಯೊಬ್ಬ ಉತ್ತರ ಪ್ರದೇಶದ ವ್ಯಕ್ತಿಗೆ ಕಳುಹಿಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: PUC ಪಠ್ಯ ಪರಿಷ್ಕರಣೆ – ಚಕ್ರತೀರ್ಥ ಸಮಿತಿಯಿಂದ ವರದಿ ಪಡೆಯದಿರಲು ಶಿಕ್ಷಣ ಇಲಾಖೆ ತೀರ್ಮಾನ

ವಾಟ್ಸಪ್ ಸಂದೇಶ ಕಳುಹಿಸಿದ ವ್ಯಕ್ತಿಯನ್ನು ಈಗಾಗಲೇ ಗುರುತಿಸಲಾಗಿದೆ. ಆರೋಪಿ ಸೆಂಥಿಲ್‌ನನ್ನು ತಮಿಳು ನಾಡಿನಲ್ಲಿ ಬಂಧಿಸಲಾಗಿದೆ. ಈ ರೀತಿಯಾಗಿ ಬೆದರಿಕೆ ಕರೆ ಅಥವಾ ಸಂದೇಶಗಳನ್ನು ಕಳುಹಿಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶಂಕಿತ ಉಗ್ರನ ಬಂಧನ:
ಭಯೋತ್ಪದನೆ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾದ ಜಮ್ಮು ಕಾಶ್ಮೀರದ ನಿವಾಸಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ರಾಜ್ಯದ ಪೊಲೀಸರೂ ಈ ಕುರಿತು ತನಿಖೆ ಆರಂಭಿಸಿದ್ದಾರೆ ಎಂದಿದ್ದಾರೆ.

ನಗರದಲ್ಲಿ ನೆಲೆಸಿದ್ದ ಶಂಕಿತ ಉಗ್ರರಿಗೆ ಆಶ್ರಯ ನೀಡಿದ್ದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಪೊಲೀಸರು ಜಮ್ಮು ಕಾಶ್ಮೀರ ರಾಜ್ಯದ ಪೋಲೀಸರ ಜತೆ ಸಮನ್ವಯ ಸಾಧಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಬಂಧಿಸಲಾದ ಶಂಕಿತ ಉಗ್ರನಿಗೆ ನೆಲೆಸಲು ಅವಕಾಶ ಮಾಡಿಕೊಟ್ಟಿದ್ದಲ್ಲದೆ ಮೊಬೈಲ್ ಫೋನ್ ಪಡೆಯಲು ಹಾಗೂ ಇತರ ದಾಖಲೆಗಳನ್ನು ಪಡೆಯಲು ಸ್ಥಳೀಯರೂ ಸಹಾಯ ಮಾಡಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಪುಂಡ, ಪೋಕರಿಯಂತೆ ಮಾತನಾಡುತ್ತಿದ್ದಾರೆ: ಸಿದ್ದು ವಿರುದ್ಧ ಶೆಟ್ಟರ್ ವಾಗ್ದಾಳಿ

ಜಮ್ಮು ಕಾಶ್ಮೀರದ ಉಗ್ರನನ್ನು ಪತ್ತೆ ಹಚ್ಚಲು ರಾಜ್ಯದ ಪೊಲೀಸರು ಸಕರಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ರಾಜ್ಯದ ಪೊಲೀಸರು ಜಮ್ಮು ಕಾಶ್ಮೀರದ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದರು. ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *