ಪ್ರತ್ಯೇಕ ರಾಜ್ಯ ಕೇಳುವ ನಾಯಕರು ಉ.ಕರ್ನಾಟಕದ ಮುಖ್ಯಮಂತ್ರಿ ಆಕಾಂಕ್ಷಿಗಳು: ಸೊಬರದಮಠ

ಗದಗ: ಪ್ರತ್ಯೇಕ ರಾಜ್ಯದ ಧ್ವನಿ ಎತ್ತಿರುವ ನಾಯಕರು ಉತ್ತರ ಕರ್ನಾಟಕ ರಚನೆಯಾದ ಮೇಲೆ ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದಾರೆ ಎಂದು ರೈತಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರದಮಠ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದ ಕೂಗಿಗೆ ಮಹದಾಯಿ ಹೋರಾಟವನ್ನು ಬಳಸುವುದು ಸೂಕ್ತವಲ್ಲ. ಮಹದಾಯಿ ಹೋರಾಟಕ್ಕೂ ಹಾಗೂ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಅಭಿವೃದ್ಧಿಯಾಗಿಲ್ಲ ಎನ್ನುವ ಬಗ್ಗೆ ನಮಗೂ ನೋವಿದೆ. ಅಭಿವೃದ್ಧಿ ಕೂಗಿಗೆ ನಮ್ಮ ರೈತಸೇನಾ ಧ್ವನಿಗೂಡಿಸುತ್ತದೆ. ಆದರೆ ಮಹದಾಯಿ ಹೋರಾಟ ಅಖಂಡ ಕರ್ನಾಟಕದ ಹೋರಾಟ ಎಂದು ತಿಳಿಸಿದರು.

ಮಹದಾಯಿ ಹೋರಾಟ ಉತ್ತರ ಕರ್ನಾಟಕ್ಕೆ ಸೀಮಿತವಾದ ಹೋರಾಟವಲ್ಲ. ದೇಶದಲ್ಲಿ ಪ್ರಚಲಿತವಿರುವ ಹೋರಾಟವಾಗಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕಾದರೆ ಜನಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟಿಸಬೇಕು. ಜಾತಿ ಹೋಗಲಾಡಿಸಿ ನಾವೆಲ್ಲ ಒಗ್ಗಟ್ಟು ತೋರಿಸಿದರೆ ರಾಜಕಾರಣಿಗಳು ಅಭಿವೃದ್ಧಿಗೆ ಮುಂದಾಗುತ್ತಾರೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಮಹದಾಯಿ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಕಂಡಿಲ್ಲ ಎಂದು ಹೇಳಿದರು.

ಉತ್ತರ ಕರ್ನಾಟಕ ಅಭಿವೃದ್ಧಿಗೆ ಎಲ್ಲ ಸಂಘ, ಸಂಟನೆಗಳು ಒಂದಾಗಬೇಕು. ಇದಕ್ಕೆ ಶಾಸಕರು, ವಿಧಾನ ಪರಿಷತ್ ಸದಸ್ಯರು ಪೂರಕ ಬೆಂಬಲ ಸಿಕ್ಕಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

Comments

Leave a Reply

Your email address will not be published. Required fields are marked *