ಕಾಲೆಳೆದವರು ಕಾಲ್ ಶೀಟ್ ಕೇಳ್ತಿದ್ದಾರೆ: ಮಾತಿನಲ್ಲೇ ತಿವಿದ ಚಿಕ್ಕಣ್ಣ

ಸ್ಮಿತಾ ಉಮಾಪತಿ ನಿರ್ಮಿಸಿರುವ, ಅನಿಲ್ ಕುಮಾರ್ ನಿರ್ದೇಶಿಸಿರುವ ಹಾಗೂ ನಟ ಚಿಕ್ಕಣ್ಣ (Chikkanna) ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ  ‘ಉಪಾಧ್ಯಕ್ಷ’ (Upadyaksha) ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಯಶಸ್ಸಿಗೆ ಕಾರಣ ರಾಜ್ಯಾದ್ಯಂತ ಪ್ರೇಕ್ಷಕರು ತೋರಿಸುತ್ತಿರುವ ಒಲವು. ಆ ಒಲವಿಗೆ ಧನ್ಯವಾದ ಹೇಳಲು ಚಿತ್ರತಂಡ ಸಕ್ಸಸ್ ಮೀಟ್ ಆಯೋಜಿಸಿತ್ತು.

ಈ ಚಿತ್ರ ಆರಂಭವಾಗಿದ್ದು ಚಿಕ್ಕಣ್ಣ ಅವರ ಮನೆಯಿಂದ. ಅಲ್ಲೇ ನಿರ್ಮಾಪಕ ಉಮಾಪತಿ ಅವರು ಕಥೆ ಕೇಳಿದ್ದು. ಸ್ಕ್ರಿಪ್ಟ್ ಟೈಮ್ ನಲ್ಲಿ ಸಾಕಷ್ಟು ಜನ ನನಗೆ ಸಹಕಾರ ನೀಡಿದ್ದಾರೆ. ಜನರಿಗೆ ನಮ್ಮ ಸಿನಿಮಾ ಇಷ್ಟವಾಗಿದೆ. ಕುಟುಂಬ ಸಮೇತ ಬಂದು ನೋಡುತ್ತಿದ್ದಾರೆ. ಬಹಳ ಸಂತೋಷವಾಗಿದೆ ಎಂದರು ನಿರ್ದೇಶಕ ಅನಿಲ್ ಕುಮಾರ್.

ಉಮಾಪತಿ ಫಿಲಂಸ್ ಲಾಂಛನದಲ್ಲಿ ಹೆಬ್ಬುಲಿ, ರಾಬರ್ಟ್, ಮದಗಜ ಚಿತ್ರಗಳನ್ನು ನಿರ್ಮಿಸಿದ್ದೇವೆ. ಡಿ.ಎನ್ ಪಿಕ್ಚರ್ಸ್ ಮೂಲಕ ನನ್ನ ಪತ್ನಿ ಸ್ಮಿತಾ ಉಮಾಪತಿ ಈ ಹಿಂದೆ ಒಂದಲ್ಲಾ ಎರಡಲ್ಲಾ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಿಸಿದ್ದರು. ಈಗ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅಂದುಕೊಂಡದಕ್ಕಿಂತ ಹೆಚ್ಚಿನ ಯಶಸ್ಸು ಸಿಕ್ಕಿದೆ. ಈ ಯಶಸ್ಸು ನನ್ನ ತಂಡದ್ದು. ಮುಖ್ಯವಾಗಿ ಚಿಕ್ಕಣ್ಣ ಅವರದು. ಬಿಡಗಡೆಗೂ ಮುನ್ನ ಚಿಕ್ಕಣ್ಣ ತುಂಬಾ ಒತ್ತಡದಲ್ಲಿದ್ದರು. ಈ ಗೆಲುವು ಅವರಿಗೆ ಬೇಕಿತ್ತು. ಇನ್ನು ರಾಜ್ಯಾದ್ಯಂತ ನಮ್ಮ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರದಲ್ಲಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗಿದೆ ಎಂದು ಉಮಾಪತಿ ಶ್ರೀನಿವಾಸಗೌಡ ತಿಳಿಸಿದರು. ನಿರ್ಮಾಪಕಿ‌ ಸ್ಮಿತಾ ಉಮಾಪತಿ ಎಲ್ಲರಿಗೂ ಧನ್ಯವಾದ ತಿಳಿಸಿದರು.

ನಾನು ನಾಯಕನಾಗುತ್ತಿದ್ದೇನೆ ಎಂದಾಗ ಕಾಲೆಳೆದವರೆ ಜಾಸ್ತಿ ಎಂದು ಮಾತನಾಡಿದ ನಾಯಕ ಚಿಕ್ಕಣ್ಣ, ಕಾಲೆಳೆದವರೆ ಈಗ ಕಾಲ್ ಶೀಟ್ ಕೇಳುತ್ತಿದ್ದಾರೆ. ಕರ್ನಾಟಕದ ಜನ ನಮ್ಮ ಸಿನಿಮಾವನ್ನು ಗೆಲ್ಲಿಸಿದ್ದಾರೆ. ಅವರಿಗೆ ಇಲ್ಲಿಂದಲೇ ಶರಣು. ಇನ್ನು ನನ್ನ ನಂಬಿ ದುಡ್ಡು ಹಾಕಿರುವ ನಿರ್ಮಾಪಕರಿಗೆ, ಒಳ್ಳೆಯ ಚಿತ್ರಕೊಟ್ಟ ನಿರ್ದೇಶಕರಿಗೆ ಹಾಗೂ ಇಡೀ ತಂಡಕ್ಕೆ ನನ್ನ ಧನ್ಯವಾದ. ಇನ್ನು ನಾನು ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೆ ನನಗೆ ಶಿವರಾಜಕುಮಾರ್, ದರ್ಶನ್, ಸುದೀಪ್, ಯಶ್, ಧ್ರುವ ಸರ್ಜಾ, ಪ್ರಜ್ವಲ್ ದೇವರಾಜ್, ಅಭಿಷೇಕ್ ಅಂಬರೀಶ್, ಧನ್ವೀರ್, ಸೂರ್ಯ ಸೇರಿದಂತೆ ಸಾಕಷ್ಟು ನಾಯಕರು ಪ್ರೋತ್ಸಾಹ ನೀಡಿದ್ದಾರೆ ಅವರಿಗೆಲ್ಲಾ ವಿಶೇಷ ಧನ್ಯವಾದ ಎಂದರು.  ಸಹಾಯ ನೀಡಿದವರನ್ನು ನೆನೆಯಲು ಹೆಸರಿನ ಪಟ್ಟಿಯನ್ನೇ ಸಿದ್ದ ಮಾಡಿಕೊಂಡು ಬಂದಿದ್ದ ಚಿಕ್ಕಣ್ಣ ಪ್ರತಿಯೊಬ್ಬರಿಗೂ ಕೃತಜ್ಞತೆ ತಿಳಿಸಿದರು.

ಚಿತ್ರ ಆರಂಭವಾದಾಗ ನಾನು ಕೆಲವು ಮಾತುಗಳನ್ನು ಕೇಳಿದ್ದೆ. ಈ ಗೆಲುವು ಅದನೆಲ್ಲಾ ಮರೆಸಿದೆ. ಆಡಿದವರಿಗೆ ತಕ್ಕ ಉತ್ತರ ಸಿಕ್ಕಿದೆ. ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು ನಾಯಕಿ ಮಲೈಕ.‌ ನಟ ಧರ್ಮಣ್ಣ ಸಹ ಚಿತ್ರದ ಕುರಿತು ಮಾತನಾಡಿದರು.