ಕಲ್ಲು ತೂರಾಟ ನಡೆಸಿದವರ ಸವಲತ್ತು ವಾಪಸ್‍ಗೆ ಯತ್ನಾಳ್ ಆಗ್ರಹ

ಬೆಂಗಳೂರು: ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ (Channagiri) ಪೊಲಿಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದವರಿಗೆ ಸರ್ಕಾರದಿಂದ ನೀಡಲಾದ ಸವಲತ್ತುಗಳನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಪೊಲೀಸ್ (Police) ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ ವಿಚಾರವಾಗಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಚನ್ನಗಿರಿಯಲ್ಲಿ ಬಾಂಧವರ ಗುಂಪೊಂದು ಪೊಲೀಸ್ ಠಾಣೆಗೆ ಕಲ್ಲು ತೂರಾಟ ನಡೆಸಿದೆ. ಪೊಲೀಸ್ ವಾಹನಗಳಿಗೆ ಬೆಂಕಿ ಇಟ್ಟಿದೆ. ಈ ಘಟನೆ ಅವರ ಮನಃಸ್ಥಿತಿ ಎಂತದ್ದು ಎಂಬುದು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಚನ್ನಗಿರಿ ಠಾಣೆಯ ಮೇಲೆ ಕಲ್ಲು ತೂರಾಟ – 11 ಮಂದಿ ವಶಕ್ಕೆ

ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದವರ ಮೇಲೆ ಕೇಸ್ ದಾಖಲಿಸಬೇಕು. ಸರ್ಕಾರಕ್ಕೆ ನಷ್ಟ ಮಾಡಿರುವ ಅಷ್ಟು ವೆಚ್ಚವನ್ನು ಅವರಿಂದ ಭರಿಸಬೇಕು. ಅಲ್ಲದೇ, ಸ್ಥಳೀಯ ಡಿವೈಎಸ್‍ಪಿ ಮನವಿ ಮಾಡಿದರೂ ಸಹ ಚದುರದ ಗುಂಪಿನ ಮುಖ್ಯಸ್ಥ ಹಾಗೂ ಪ್ರಚೋದನೆ ಮಾಡಿದವರ ಮೇಲೆ ಕೇಸ್ ದಾಖಲಿಸಬೇಕು. ಅವರಿಗೆ ಸರ್ಕಾರ ನೀಡಿರುವ ಎಲ್ಲಾ ರೀತಿಯ ಸವಲತ್ತನ್ನು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಏನಿದು ಪ್ರಕರಣ? ಶುಕ್ರವಾರ ರಾತ್ರಿ ಚನ್ನಗಿರಿ ಪೊಲೀಸ್ ಠಾಣೆ ಮುಂಭಾಗ ರಣರಂಗವಾಗಿ ಸೃಷ್ಟಿಯಾಗಿತ್ತು. ಚನ್ನಗಿರಿ ಪಟ್ಟಣದ ಟಿಪ್ಪು ನಗರದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಅದಿಲ್‌ನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲಿ ಅದಿಲ್ ಲೋ ಬಿಪಿಯಿಂದ ಕುಸಿದು ಬಿದ್ದಿದ್ದ. ಕೂಡಲೇ ತಾಲೂಕು ಆಸ್ಪತ್ರೆಗೆ ಪೊಲೀಸರು ಆತನನನ್ನು ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದಿಲ್ ಸಾವನ್ನಪ್ಪಿದ್ದ.

ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಕ್ರೋಶಗೊಂಡ ಅದಿಲ್ ಕುಟುಂಬಸ್ಥರು ಮೃತದೇಹವನ್ನು ಪೊಲೀಸ್ ಠಾಣೆಯ ಮುಂದಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದರು. ನಂತರ ಆದಿಲ್‌ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸುತ್ತಿದ್ದಾಗ ಕೆಲ ಕಿಡಿಗೇಡಿಗಳ ಗುಂಪು ಏಕಾಏಕಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿತ್ತು. ಠಾಣೆಯ ಮುಂಭಾಗ ಇರುವ ವಾಹನಗಳು, ಗಿಡ, ಕಿಟಕಿ ಗಾಜುಗಳನ್ನು ಧ್ವಂಸ ಮಾಡಿತ್ತು. ಏಕಾಏಕಿ ನಡೆಸಿದ ಕಲ್ಲು ತೂರಾಟದ ವೇಳೆ 11 ಜನ ಪೊಲೀಸ್ ಸಿಬ್ಬಂದಿಗೆ ಗಾಯಗಾಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಹಣ ಡಬಲ್ ಮಾಡೋದಾಗಿ 30 ಕೋಟಿ ರೂ. ವಂಚಿಸಿದ ದಂಪತಿ