ಈ ವರ್ಷ ಒಂದೇ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಪ್ರಿಂಟ್-ಪಿಯು ಬೋರ್ಡ್ ನಿಂದ ಗೊಂದಲದ ಆದೇಶ

ಬೆಂಗಳೂರು: ದ್ವಿತೀಯ ಪಿಯುಸಿ ಮಕ್ಕಳಿಗೆ ಈ ಬಾರಿ ಒಂದೇ ಭಾಷೆಯ ಪ್ರಶ್ನೆ ಪತ್ರಿಕೆ ಸಿಗುತ್ತೆ. ಪೇಪರ್ ಉಳಿಸುವ ಜೊತೆ ಸೆಕ್ಯೂರಿಟಿ ಫ್ಯೂಚರ್ ಹೆಸರಲ್ಲಿ ಪ್ರಶ್ನೆ ಪತ್ರಿಕೆಯನ್ನು ಒಂದೇ ಭಾಷೆಯಲ್ಲಿ ಮುದ್ರಣ ಮಾಡಲು ಪಿಯು ಬೋರ್ಡ್ ಆದೇಶ ಹೊರಡಿಸಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.

ಪಿಯು ಪ್ರಶ್ನೆ ಪತ್ರಿಕೆ ಲೀಕಾಸುರರಿಂದ ಪಿಯು ಬೋರ್ಡ್‍ನ ಮಾನ-ಮರ್ಯಾದೆ ಮೂರು ಕಾಸಿಗೆ ಹರಾಜಾಗಿತ್ತು. ಯಾವಾಗ ಪಿಯು ಬೋರ್ಡ್ ನಿರ್ದೇಶಕರಾಗಿ ಶಿಖಾ ಮೇಡಂ ಬಂದರೋ ಪಿಯು ಬೋರ್ಡ್‍ನಲ್ಲಿದ್ದ ಭ್ರಷ್ಟ ವ್ಯವಸ್ಥೆಗೆ ಬ್ರೇಕ್ ಹಾಕಿ, ಕಳೆದ ವರ್ಷ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ಶಹಬ್ಬಾಸ್ ಗಿರಿ ಪಡೆದಿದ್ದರು. ಪ್ರತಿ ವರ್ಷ ಪ್ರಶ್ನೆ ಪತ್ರಿಕೆಗಳು ಕನ್ನಡ, ಇಂಗ್ಲಿಷ್ ನಲ್ಲಿ ಮುದ್ರಣ ಮಾಡಲಾಗುತಿತ್ತು. ಆದರೆ ಈ ವರ್ಷದಿಂದ ಕೇವಲ ಒಂದೇ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಮುದ್ರಣ ಮಾಡಲು ನಿರ್ಧರಿಸಲಾಗಿದೆ.

ಈ ಬದಲಾವಣೆ ಬಗ್ಗೆ ಪಿಯು ಬೋರ್ಡ್ ನಿರ್ದೇಶಕಿ ಶಿಖಾ ಅವರನ್ನು ಕೇಳಿದರೆ, ಈ ಹಿಂದೆ ಪರೀಕ್ಷಾ ಅಕ್ರಮಗಳು ನಡೆದಿವೆ. ಹೀಗಾಗಿ ಅಕ್ರಮಗಳಿಗೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಎರಡು ಭಾಷೆಗಳಲ್ಲಿ ಪ್ರಶ್ನೆ ಪತ್ರಿಕೆ ಪ್ರಿಂಟ್ ಮಾಡೋದರಿಂದ ಪೇಪರ್ ಗೆ ಹೆಚ್ಚು ಖರ್ಚಾಗುತ್ತೆ ಎನ್ನುವ ಸ್ಪಷ್ಟನೆ ಸಿಕ್ಕಿದೆ. ಇನ್ನು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಟೆಕ್ನಿಕಲ್ ವರ್ಡ್‍ಗಳನ್ನು ಸೂಕ್ತ ರೀತಿಯಲ್ಲಿ ಪ್ರಿಂಟ್ ಮಾಡುತ್ತಿದ್ದೀವಿ ಎಂದು ಶಿಖಾ ತಿಳಿಸಿದ್ದಾರೆ.

ಯುಪಿಎಸ್‍ಸಿ, ಕೆಪಿಎಸ್‍ಸಿ, ಸಿಇಟಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಯನ್ನು ಎರಡು ಭಾಷೆಗಳಲ್ಲಿ ಪ್ರಿಂಟ್ ಮಾಡುತ್ತಾರೆ. ಪರೀಕ್ಷಾ ಅಕ್ರಮ ತಡೆಯೋಕೆ ಕೋಟಿ ಕೋಟಿ ಖರ್ಚು ಮಾಡೋ ಪಿಯು ಬೋರ್ಡ್, ಜಸ್ಟ್ ಪೇಪರ್ ಉಳಿಸೋಕೆ ಎಂದು ಇಂತಹ ನಿಯಮ ತಂದಿರೋದು ವಿದ್ಯಾರ್ಥಿಗಳಿಗೆ ಆತಂಕ ತಂದಿದೆ.

Comments

Leave a Reply

Your email address will not be published. Required fields are marked *