ನಾಯಿಯ ತಲೆಗೆ 47 ಲಕ್ಷ ರೂ. ಬಹುಮಾನ ಘೋಷಿಸಿದ ಸ್ಮಗ್ಲರ್!

ಬೊಗೊಟಾ: 10 ಸಾವಿರ ಕೆಜಿ ಕೊಕೇನ್ ಪತ್ತೆ ಹಚ್ಚಿದ್ದ ಸೊಂಬ್ರಾ (ಜರ್ಮನ್ ಶೆಫರ್ಡ್) ನಾಯಿಯ ತಲೆಗೆ ಕೊಲಂಬಿಯಾದ ಸ್ಮಗ್ಲರ್ ಒಬ್ಬ 47 ಲಕ್ಷ ರೂ. ಬಹುಮಾನ ಘೋಷಿಸಿದ್ದಾನೆ.

ಹೌದು, ಕೊಲಂಬಿಯಾದ ಒಟೋನಿಯಲ್ ಕುಖ್ಯಾತ ಸ್ಮಗಲರ್ ಆಗಿದ್ದು, ಆತನೇ 200 ದಶಲಕ್ಷ ಕೊಲಂಬಿಯನ್ ಪೆಸೊ (ಅಂದಾಜು 47 ಲಕ್ಷ ರೂ.) ಬಹುಮಾನದ ಮೊತ್ತವನ್ನು ಘೋಷಿಸಿದ್ದಾನೆ ಎಂದು ಗುಪ್ತಚರ ಇಲಾಖೆಯ ಮಾಹಿತಿಯನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

ಆರು ವರ್ಷದ ಸೊಂಬ್ರಾ, ಮಾದಕವಸ್ತುಗಳ ನಿಗ್ರಹ ದಳದಲ್ಲಿ ಸೇವೆ ಸಲ್ಲಿಸುತ್ತಿದೆ. ಅಕ್ರಮ ಮಾದಕ ವಸ್ತು ಸಾಗಾಣಿಕೆ ಮಾಡುವ ಜಾಲವನ್ನು ಪತ್ತೆ ಹಚ್ಚುವಲ್ಲಿ ಸೊಂಬ್ರಾ ನಿಸ್ಸಿಮಳು. ಸದ್ಯ ಬೊಗೊಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜೀವ ಬೆದರಿಕೆಯ ಹಿನ್ನೆಲೆಯಲ್ಲಿ ನಾಯಿಗೆ ಭಾರೀ ಭದ್ರತೆ ನೀಡುವಂತೆ ಕೊಲಂಬಿಯಾ ಸರ್ಕಾರ ಆದೇಶಿಸಿದೆ.

ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿ 245 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸುವಲ್ಲಿ ಸೊಂಬ್ರಾ ಯಶಸ್ವಿಯಾಗಿದೆ. ಹೀಗಾಗಿ ಇದನ್ನು ಕೊಂದವರಿಗೆ 47 ಲಕ್ಷ ರೂ. ಬಹುಮಾನ ನೀಡುವುದಾಗಿ ಒಟೋನಿಯಲ್ ಪ್ರಕಟಿಸಿದ್ದಾನೆ.

ಸೊಂಬ್ರಾಳಿಗೆ ರಕ್ಷಣೆಗೆ ಕೊಲಂಬಿಯಾ ರಾಷ್ಟ್ರೀಯ ಪೊಲೀಸ್ ದಳ ಮುಂದಾಗಿದೆ. ಬೊಗೊಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇವೆ ಸಲ್ಲಿಸುತ್ತಿರುವ ಸೊಂಬ್ರಾ ಈ ಹಿಂದೆ ಅಟ್ಲಾಂಟಿಕ್ ಕರಾವಳಿ ಪ್ರದೇಶ ಸೇರಿದಂತೆ ಅಮೆರಿಕಾದ ಕೆಲವು ಭಾಗದಲ್ಲಿಯೂ ಸೇವೆ ಸಲ್ಲಿಸಿದೆ.

Comments

Leave a Reply

Your email address will not be published. Required fields are marked *