ವಾಷಿಂಗ್ಟನ್: ಮನೆಯಲ್ಲೋ, ಹಿತ್ತಲಲ್ಲೋ ಹಾವು ಕಾಣಿಸಿಕೊಂಡ್ರೆ ಅದರ ಹತ್ರ ಹೋಗೋಕೂ ಭಯ ಪಡ್ತೀವಿ. ಅಂಥದ್ರಲ್ಲಿ ಮೈ ಮೇಲೆಯೇ ಹಾವು ಹರಿದು ಬಂದ್ರೆ ಏನಾಗ್ಬೇಡ. ಯೂಟ್ಯೂಬರ್ ನಿಕ್ ಬಿಶಾಪ್ ಎಂಬವರು ಕಾಡು ಪ್ರಾಣಿಗಳ ಮತ್ತು ಹಾವುಗಳ ಬಗ್ಗೆ ಡಾಕ್ಯುಮೆಂಟರಿ ಮಾಡಲು ಅಮೆರಿಕದಾದ್ಯಂತ ಸಂಚಾರ ಮಾಡ್ತಿರ್ತಾರೆ. ಹೀಗೆ ಒಮ್ಮೆ ಚಿತ್ರೀಕರಣ ಮಾಡಲೆಂದು ಹೋದಾಗ ಸುಸ್ತಾಯ್ತು ಅಂತ ಕುಳಿತಿದ್ದ ನಿಕ್ ಬಳಿ ವಿಷಕಾರಿ rattlesnake ಜಾತಿಯ ಹಾವು ಬಂದಿದೆ.

ಹಾವು ಸಮೀಪ ಬರುತ್ತಿದ್ದಂತೆ ನಿಕ್ ನನಗೆ ಚಲಿಸಲು ಭಯವಾಗ್ತಿದೆ, ನಾನು ಮರಗಟ್ಟಿಹೋಗಿದ್ದೇನೆ ಅಂತ ಹೇಳೋದನ್ನ ವಿಡಿಯೋದಲ್ಲಿ ಕೇಳಬಹುದು. ಹಾವನ್ನ ಓಡಿಸಲು ನಿಕ್ ಅದರ ಬಾಲ ಮುಟ್ಟಿದಾಗ ಅದು ಒಮ್ಮೆಲೆ ಆತನ ಕಾಲಿನ ಮೇಲೇರಿ ಬರುತ್ತದೆ. ಆದ್ರೂ ನಿಕ್ ಮತ್ತೊಮ್ಮೆ ಒಂದು ಕಡ್ಡಿಯಿಂದ ಅದರ ಬಾಲವನ್ನ ಮುಟ್ಟಿದ್ದು, ಅದು ಮೆಲ್ಲನೆ ನಿಕ್ ಪಕ್ಕದಲ್ಲೇ ಹರಿದು ಹಿಂದಕ್ಕೆ ಹೋಗುತ್ತದೆ.
ವಿಡಿಯೋದ ವಿವರಣೆಯ ಪ್ರಕಾರ ಇದು ಈಸ್ಟರ್ನ್ ಡೈಮಂಡ್‍ಬ್ಯಾಕ್ rattlesnake ಆಗಿದ್ದು, ಇದು ಅತ್ಯಂತ ವಿಷಕಾರಿ ಹಾವಾಗಿದೆ. ಈ ಹಾವನ್ನ ಕೆಣಕಿದರಷ್ಟೆ ದಾಳಿ ಮಾಡುತ್ತದೆ. ಅಲ್ಲದೆ ಈ ಹಾವು ಕಚ್ಚಿದ್ರೆ ಮನುಷ್ಯರು ಸಾವನ್ನಪ್ಪುತ್ತಾರೆ ಎಂದು ವರದಿಯಾಗಿದೆ.

ನಿಕ್ ತನ್ನ ಯೂಟ್ಯೂಬ್ ಖಾತೆ ನಿಕ್ ದಿ ವ್ರಾಂಗ್ಲರ್‍ನಲ್ಲಿ ಈ ವಿಡಿಯೋವನ್ನ ಹಂಚಿಕೊಂಡಿದ್ದು, ಇದು ಅತ್ಯಂತ ಅಪಾಯಕರವಾದ ವಿಷಕಾರಿ ಹಾವನ್ನ ಎದುರುಗೊಂಡಿದ್ದು. ಇದನ್ನ ಪ್ರಯತ್ನಿಸಬೇಡಿ ಅಂತ ವಿವರಣೆಯಲ್ಲಿ ಹೇಳಿದ್ದಾರೆ.
ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಾಗಿನಿಂದ ಈವರೆಗೆ 60 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, 90 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.
ವಿಡಿಯೋ ನೋಡಿದವರಲ್ಲಿ ಕೆಲವರು ಇದು ನಿಜಕ್ಕೂ ಭಯಾನಕವಾಗಿದೆ ಎಂದು ಕಮೆಂಟ್ ಮಾಡಿದ್ದರೆ ಇನ್ನೂ ಕೆಲವರು, ನಿನಗೆ ಬುದ್ಧಿ ಇಲ್ವಾ ಎಂದಿದ್ದಾರೆ. ಆದ್ರೆ ಹಾವು ಬಂದ್ರೂ ಕ್ಯಾಮೆರಾಮೆನ್ ಸಹಾಯಕ್ಕೆ ಧಾವಿಸದೇ ಇದ್ದಿದ್ದರಿಂದ ಕೆಲವರು ಈ ವಿಡಿಯೋ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.
https://www.facebook.com/Nickthewranglerfanpage/videos/1774746626188252/

Leave a Reply