ಇದು ಫೋರ್ ಸ್ಟಾರ್ ಮೈತ್ರಿ ಸರ್ಕಾರ – ಆಪ್ತರ ಬಳಿ ಟಗರು ಗುಟುರು

– ಪಕ್ಷ ಗಟ್ಟಿಯಾಗಬೇಕಾದರೆ ಮೈತ್ರಿಗೆ ಗುಡ್‍ಬೈ ಹೇಳೋಣ
– ಸೋತರೂ ಕೇರ್ ಮಾಡಲ್ಲ

ಬೆಂಗಳೂರು: ಸುಮಲತಾ ಅವರು ಆಯೋಜಿಸಿದ್ದ ಭೋಜನ ಕೂಟದ ಸಿಸಿಟಿವಿ ಬಿಡುಗಡೆಯಾದ ಬೆನಲ್ಲೇ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಜಿ.ಟಿ.ದೇವೇಗೌಡ ಹೇಳಿಕೆಗೆ ಸಿದ್ದರಾಮಯ್ಯ ಆಪ್ತರೆಲ್ಲಾ ಕಿಡಿಕಾರಿದ್ದಾರೆ.

ಹೌದು, ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಮಾಜಿ ಸಿಎಂ ಸಿದ್ದರಾಮಯ್ಯ ಈಗ ನೇರವಾಗಿ ಫೀಲ್ಡ್ ಗಿಳಿದಿದ್ದು, ಆಪ್ತರ ಬಳಿ ಪೊಗರಿನ ಗುಟುರು ಹಾಕಿದ್ದಾರೆ. 22 ದಿನ ಅಷ್ಟೇ ಐ ಯಾಮ್ ರೆಡಿ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಹೇಳಿದ ಆ ಒಂದೇ ಒಂದು ಮಾತಿಗೆ ಆಪ್ತರೇ ಶಾಕ್ ಆಗಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಸಿದ್ದರಾಮಯ್ಯ ಹೇಳಿದ್ದು ಏನು?
ಇದು ಫೋರ್ ಸ್ಟಾರ್ ಮೈತ್ರಿ ಸರ್ಕಾರವಾಗಿದ್ದು ಹೆಸರಿಗೆ ಮಾತ್ರ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಷ್ಟೇ. ದೇವೇಗೌಡರು, ಕುಮಾರಸ್ವಾಮಿ, ಶಿವಕುಮಾರ್, ಪರಮೇಶ್ವರ್ ಅವರು ನಡೆಸುವ ಸರ್ಕಾರ ಇದು. ಅವರು ನಾಲ್ಕು ಜನರ ನಡುವೆ ಮಾತ್ರ ಮುದ್ದಾದ ಮೈತ್ರಿ ಇದು. ಮುದ್ದಾದ ಮೈತ್ರಿ ನಮ್ದು ಇಲ್ಲ, ನಿಮ್ದು ಇಲ್ಲ. ನಮ್ಮ ಕೆಲಸಗಳು ಒಂದು ಆಗುತ್ತಿಲ್ಲ. ನೀವು ಸ್ವತಂತ್ರವಾಗಿಲ್ಲ ಎಂದು ಆಪ್ತ ಸಚಿವರ ಎದುರು ಸಿದ್ದರಾಮಯ್ಯ ಗುಟುರು ಹಾಕಿದ್ದಾರೆ.

ನನ್ನ ಪ್ರಕಾರ ಮೈಸೂರಿನಲ್ಲಿ ನಾವು ಸೋಲುವುದಿಲ್ಲ. ಸೋತರೂ ಕೇರ್ ಮಾಡುವುದಿಲ್ಲ. ಆದರೆ ಫಲಿತಾಂಶದ ಬಳಿಕ ನಮ್ಮ ದಾರಿಯನ್ನು ನಾವು ನೋಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಗಟ್ಟಿಗೊಳಿಸಬೇಕು ಎಂದರೆ ಮೈತ್ರಿಗೆ ಗುಡ್‍ಬೈ ಹೇಳಬೇಕು. ವಿರೋಧ ಪಕ್ಷದಲ್ಲಿ ನಾವು ನಾಲ್ಕು ವರ್ಷ ಕುಳಿತರೂ ಪರವಾಗಿಲ್ಲ. ಈ ನಾಲ್ಕು ಸ್ಟಾರ್ ಗಳ ಮೈತ್ರಿಯಿಂದ ನಮಗೂ ಲಾಭ ಇಲ್ಲ, ಕಾಂಗ್ರೆಸ್‍ಗೂ ಲಾಭ ಇಲ್ಲ ಎಂದು ಹೇಳಿ ಕಿಡಿಕಾರಿದ್ದಾರೆ.

ಮೇ 23ಕ್ಕೆ ಫಲಿತಾಂಶ ಬರಲಿ, ರಾಹುಲ್ ಗಾಂಧಿ ಹತ್ತಿರ ನಾನೇ ಮಾತನಾಡುತ್ತೇನೆ. ಅಲ್ಲಿ ತನಕ ಸ್ವಲ್ಪ ತಾಳ್ಮೆಯಿಂದ ಇರಿ ಎಂದು ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಜಮೀರ್ ಅಹಮದ್ ಅವರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *