ಮಗನ ಜೊತೆಗಿದ್ರೆ ಗರ್ಲ್ ಫ್ರೆಂಡ್ ಅನ್ಕೋತಾರಂತೆ ಜನ- ಈ ಮಹಿಳೆ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರ!

ಜಕಾರ್ತಾ: ವಯಸ್ಸಾಗೋದನ್ನ ತಡೆಯೋಕಾಗಲ್ಲ. ಕೆಲವರು ಯಂಗ್ ಆಗಿ ಕಾಣ್ಬೇಕು ಅಂತ ಏನೆಲ್ಲಾ ಪ್ರಯತ್ನ ಮಾಡ್ತಾರೆ. ಇನ್ನೂ ಕೆಲವರಿಗೆ ಕಾಂತಿಯುತವಾದ ತ್ವಚೆ ಇದ್ದು, ಯಂಗ್ ಆಗಿ ಕಾಣಿಸಿದ್ರೂ ಅವರ ವಯಸ್ಸನ್ನ ಊಹಿಸಿಬಿಡಬಹುದು. ಆದ್ರೆ ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬರಿಗೆ ವಯಸ್ಸು 50 ಆದರೂ ಇನ್ನೂ ಯುವತಿಯಂತೆ ಕಾಣಿಸೋದ್ರಿಂದ ಇವರ ನಿಜವಾದ ವಯಸ್ಸು ಕೇಳಿದಾಗ ಜನ ಶಾಕ್ ಆಗ್ತಾರೆ.

ಜಕಾರ್ತಾದವರಾದ ಪುಷ್ಪ ದೇವಿಗೆ 50 ವರ್ಷ ವಯಸ್ಸು. ಆದ್ರೆ ಇನ್ನೂ ಯುವತಿಯಂತೆ ಕಾಣೋದ್ರಿಂದ ಜನರ ಹುಬ್ಬೇರಿಸಿದ್ದಾರೆ. ಇವರು ಹದಿಜೆನೆಟಿಕ್ಸ್ ಅನ್ನೋ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಬರೋಬ್ಬರಿ 2.5 ಲಕ್ಷಕ್ಕಿಂತ ಅಧಿಕ ಫ್ಯಾನ್ ಫಾಲೋವರ್‍ಗಳಿದ್ದಾರೆ. ಅಲ್ಲದೆ ಇವರು ಇಂಡೋನೇಷ್ಯಾದ ಕಿರುತೆರೆಯಲ್ಲೂ ಪ್ರಸಿದ್ಧರಾಗಿದ್ದಾರೆ.

ಇತ್ತೀಚಿಗೆ ಪುಷ್ಪ ದೇವಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಫೋಟೋ ನೋಡಿದವರಿಗೆ ಇವರ ನಿಜವಾದ ವಯಸ್ಸು ಕೇಳಿ ನಂಬಲಾಗಿರಲಿಲ್ಲ. ಇನ್ನೂ ವಿಚಿತ್ರ ಅಂದ್ರೆ ಸಾಕಷ್ಟು ಬಾರಿ ಪುಷ್ಪಾ ಮಗನ ಜೊತೆಗಿದ್ದಾಗ ಜನ ಇವರು ಆತನ ಗರ್ಲ್ ಫ್ರೆಂಡ್ ಎಂದುಕೊಳ್ತಾರಂತೆ.

ಪುಷ್ಪ ದೇವಿ ಅವರು ಸಂದರ್ಶನವೊಂದರಲ್ಲಿ ತಮ್ಮ ಬ್ಯೂಟಿ ಸಿಕ್ರೇಟ್ ಬಗ್ಗೆ ಮಾತನಾಡಿ, ನನಗೆ ವಯಸ್ಸಾದಂತೆಲ್ಲಾ ಯಂಗ್ ಆಗಿ ಕಾಣುತ್ತೇನೆ ಎಂದು ಜನರು ಹೇಳುತ್ತಾರೆ. ಇದು ನಿಜ ಆಗಿರಬಹುದು. ಏಕೆಂದರೆ ನಾನು ಈಗ ತುಂಬಾ ಸಂತೋಷದಿಂದ ಇದ್ದೇನೆ. ನನ್ನ ಮಕ್ಕಳು ಬೆಳಿದಿದ್ದಾರೆ. ನನಗೆ ಇಷ್ಟ ಆಗುವ ಕೆಲಸವನ್ನೇ ಮಾಡುತ್ತಿದ್ದೇನೆ. ನಾನು ಸಂತೋಷವನ್ನು ಪಸರಿಸುತ್ತಿದ್ದೇನೆ ಎಂದು ಅನಿಸುತ್ತದೆ ಎಂದಿದ್ದಾರೆ.

ಪುಷ್ಪಾ ಆರೋಗ್ಯಕರವಾದ ಆಹಾರವನ್ನ ಸೇವಿಸುತ್ತಾರಂತೆ. ಏರೋಬಿಕ್ಸ್, ಸ್ವಿಮ್ಮಿಂಗ್, ಬ್ಯಾಡಿಂಟನ್ ಮತ್ತು ಝುಂಬಾ ಎಂದರೆ ಇವರಿಗೆ ಇಷ್ಟವಂತೆ.

 

Comments

Leave a Reply

Your email address will not be published. Required fields are marked *