ಎಫ್‌ 35ಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಮುಂದಾದ ತಿರುವನಂತಪುರ ಏರ್‌ಪೋರ್ಟ್‌

ತಿರುವನಂತಪುರ: ಬ್ರಿಟಿಷ್ ರಾಯಲ್ ನೇವಿ ಎಫ್-35 ಫೈಟರ್ ಜೆಟ್‌ಗೆ (F-35 Fighter jet) ಈಗ ಪಾರ್ಕಿಂಗ್‌ ಶುಲ್ಕ ವಿಧಿಸಲು ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Thiruvananthapuram Airport) ಮುಂದಾಗಿದೆ.

ಹೈಡ್ರಾಲಿಕ್ ಸಮಸ್ಯೆಯಿಂದಾಗಿ 10 ದಿನಗಳಿಂದ ತುರ್ತು ಲ್ಯಾಂಡ್‌ ಆಗಿರುವ ಜೆಟ್‌ಗೆ ಎಷ್ಟು ಶುಲ್ಕ ವಿಧಿಸಬೇಕೆಂದು ಇನ್ನೂ ಲೆಕ್ಕ ಹಾಕಿಲ್ಲ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ವಿಐಪಿ ವಿಮಾನಗಳು ಬಳಸುವ ಬೇ 4 ರಲ್ಲಿಎಫ್‌-35 ನಿಲ್ಲಿಸಲಾಗಿದೆ. ವಿಮಾನ ಸಂಚಾರ ಕಡಿಮೆ ಇರುವುದರಿಂದ ವಿಮಾನ ನಿಲ್ದಾಣದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ.  ಇದನ್ನೂ ಓದಿ: ಅಲಕಾನಂದ ನದಿಗೆ ಉರುಳಿದ 18 ಪ್ರಯಾಣಿಕರಿದ್ದ ಬಸ್‌ – ಇಬ್ಬರು ಸಾವು, 10 ಮಂದಿ ನಾಪತ್ತೆ

 

ಸಾಮಾನ್ಯವಾಗಿ ವಿಮಾನದ ತೂಕವನ್ನು ಆಧರಿಸಿ ಪಾರ್ಕಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ. ಆದರೆ ಫೈಟರ್ ಜೆಟ್ ಹಗುರವಾಗಿದೆ. ಅಷ್ಟೇ ಅಲ್ಲದೇ ನಿಗದಿತವಾಗಿ ಹಾರಾಟ ನಡೆಸುವುದಿಲ್ಲ. ಹೀಗಾಗಿ ಯಾವ ಮಾನದಂಡ ಬಳಸಿ ಶುಲ್ಕ ವಿಧಿಸಬೇಕು ಎನ್ನುವುದರ ಬಗ್ಗೆ ಈಗ ಗೊಂದಲವಿದೆ. ಇದು ರಕ್ಷಣಾ ವಿಮಾನ ಆಗಿರುವ ಕಾರಣ ಕೇಂದ್ರ ಸರ್ಕಾರ ಶುಲ್ಕ ಪಾವತಿಸುವ ಸಾಧ್ಯತೆಯಿದೆ.

ಸಮಸ್ಯೆಯನ್ನು ಸರಿಪಡಿಸಲು ಯುಕೆ ಮತ್ತು ಯುಎಸ್‌ನ 40 ಸದಸ್ಯರ ಎಂಜಿನಿಯರ್‌ಗಳ ತಂಡ ಶೀಘ್ರದಲ್ಲೇ ಆಗಮಿಸಲಿದೆ. ನಿಲ್ದಾಣದಲ್ಲಿ ರಿಪೇರಿ ಆಗದೇ ಇದ್ದರೆ ಸರಕು ಸಾಗಣೆ ವಿಮಾನದ ಮೂಲಕ ತೆಗೆದುಕೊಂಡು ಹೋಗಬೇಕಾಗುತ್ತದೆ.

ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಫ್-35 ಬಿ ಅನ್ನು ಸಾಧ್ಯವಾದಷ್ಟು ಬೇಗ ದುರಸ್ತಿ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ. ಭಾರತೀಯ ಅಧಿಕಾರಿಗಳ ನಿರಂತರ ಬೆಂಬಲಕ್ಕಾಗಿ ನಾವು ಅವರಿಗೆ ಧನ್ಯವಾದ ಹೇಳುತ್ತೇವೆ ಎಂದು ಬ್ರಿಟಿಷ್ ಹೈಕಮಿಷನ್ ತಿಳಿಸಿದೆ.

ಅಮೆರಿಕ ನಿರ್ಮಿತ, ಅತ್ಯಂತ ಅತ್ಯಾಧುನಿಕ ಫೈಟರ್ ಜೆಟ್ ವಿದೇಶದಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲು. ಇದು ರಾಯಲ್ ನೇವಿ ವಿಮಾನವಾಹಕ ನೌಕೆ HMS ಪ್ರಿನ್ಸ್ ಆಫ್ ವೇಲ್ಸ್‌ನ ಭಾಗವಾಗಿದೆ. ಈ ವಿಮಾನವಾಹಕ ನೌಕೆ ಕೆಲ ದಿನಗಳ ಹಿಂದೆ ಭಾರತೀಯ ನೌಕಾಪಡೆಯೊಂದಿಗೆ ಜಂಟಿಯಾಗಿ ತಾಲೀಮು ನಡೆಸಿತ್ತು.