ಸಿಸಿಟಿವಿ ಕ್ಯಾಮೆರಾ ಬೇರೆಡೆಗೆ ತಿರುಗಿಸಿ 7 ಶಿಕ್ಷಕರ ಮನೆಯಲ್ಲಿ ಸರಣಿ ಕಳ್ಳತನ

ವಿಜಯಪುರ: ರಜೆ ಹಿನ್ನೆಲೆ ಬೀಗ ಹಾಕಿಕೊಂಡು ಊರಿಗೆ ಹೋದ ಶಿಕ್ಷಕರ ಮನೆಗಳಲ್ಲಿ ಖದೀಮರು ಕಳ್ಳತನ ಮಾಡಿ ಎಸ್ಕೇಪ್ ಆಗಿರುವ ಘಟನೆ ವಿಜಯಪುರ ತಾಲೂಕಿನ ಕನ್ನೂರಿನಲ್ಲಿ ನಡೆದಿದೆ.

ಏಳು ಜನ ಶಿಕ್ಷಕರ ಮನೆಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮೇ 25ರಂದು ಈ ಘಟನೆ ನಡೆದಿದ್ದು, ಇದೀಗ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ಕೆಲ ಶಿಕ್ಷಕರು ರಜೆ ಮುಗಿಸಿ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಕೆಲವು ಶಿಕ್ಷಕರು ರಜೆ ಎಂದು ಊರಿಗೆ ಹೋಗಿದ್ದರು. ಇನ್ನೂ ಕೆಲವರು ಮನೆಯ ಮೇಲ್ಗಡೆ ಮಲಗಿದ್ದರು. ಈ ವೇಳೆ ಹೊಂಚು ಹಾಕಿದ ನಾಲ್ವರು ಕಳ್ಳರು ಮನೆಗಳಿಗೆ ಕನ್ನ ಹಾಕಿದ್ದಾರೆ. ಈ ಖತರ್ನಾಕ್ ಕಳ್ಳರ ಕರಾಮತ್ತು ವೈನ್ ಶಾಪ್ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದ ವಿಷಯ ತಿಳಿದು ಅದನ್ನು ಬೇರೆಡೆ ಕಳ್ಳರು ತಿರುಗಿಸಿ ತಮ್ಮ ಕೆಲಸ ಮುಗಿಸಿದ್ದಾರೆ.

ಕನ್ನೂರ ಗ್ರಾಮದ ದೇವತೆಯಾದ ನಾಡದೇವಿ ದೇವಸ್ಥಾನಕ್ಕೂ ಕಳ್ಳರು ಕನ್ನ ಹಾಕಿದ್ದಾರೆ. ಬಳಿಕ ವೈನ್ ಶಾಪ್‍ನಲ್ಲಿದ್ದ ವೈನ್ ಸಹ ಕದ್ದು, ಅದನ್ನು ಕುಡಿದು ಎಸ್ಕೇಪ್ ಆಗಿದ್ದಾರೆ. ಏಳು ಮನೆಗಳು, ದೇವಸ್ಥಾನ ಸೇರಿ ಒಟ್ಟು 6 ಲಕ್ಷ ಮೌಲ್ಯದ 400 ಗ್ರಾಂ ಚಿನ್ನಾಭರಣ ಹಾಗೂ ಎರಡು ಲಕ್ಷ ನಗದನ್ನು ದೋಚಿದ್ದಾರೆ.

ದೇವಿಯ ಮೈಮೇಲಿದ್ದ ಬೆಳ್ಳಿಯ ಕಿರೀಟ, ಖಡ್ಗ ಹಾಗೂ ತ್ರಿಶೂಲ ಸಹ ಕಳ್ಳತನ ಮಾಡಲಾಗಿದೆ. ಈ ಸಂಬಂಧ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

https://www.youtube.com/watch?v=e8vNqT4N6e4

Comments

Leave a Reply

Your email address will not be published. Required fields are marked *