ಪ್ರವಾಹಕ್ಕೆ ಮುಳುಗಡೆಯಾಗಿದ್ದ ಅಂಗಡಿಗಳನ್ನು ದೋಚಿದ ಖದೀಮರು

ಮಡಿಕೇರಿ: ಎಡಬಿಡದೆ ಸುರಿದ ಭಾರೀ ಮಳೆಗೆ ಕೊಡಗು ಜಿಲ್ಲೆಯ ಹಲವು ಪ್ರದೇಶ ತತ್ತರಿಸಿ ಹೋಗಿದೆ. ಈ ಭೀಕರ ಪ್ರವಾಹದ ನಡುವೆಯೂ ಕಳ್ಳರು ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ಭಾಗದ 10ಕ್ಕೂ ಹೆಚ್ಚು ಅಂಗಡಿಗಳಿಗೆ ಕನ್ನ ಹಾಕಿದ್ದಾರೆ.

ಒಂದೆಡೆ ಪ್ರವಾಹಕ್ಕೆ ಜನರು ಮನೆಮಠ ಕಳೆದುಕೊಂಡು ಕಂಗಾಲಾಗಿದ್ದರೆ, ಇನ್ನೊಂದೆಡೆ ಕಳ್ಳರು ಪ್ರವಾಹದಿಂದ ಲಾಭ ಪಡೆದಿದ್ದಾರೆ. ಪ್ರವಾಹಕ್ಕೆ ಮುಳುಗಡೆಯಾಗಿದ್ದ ಅಂಗಡಿಗಳನ್ನು ಟಾರ್ಗೆಟ್ ಮಾಡಿದ ಕಳ್ಳರು, ಗೋಣಿಕೊಪ್ಪಲು ಭಾಗದ 10ಕ್ಕೂ ಹೆಚ್ಚು ಅಂಗಡಿಗಳನ್ನು ದೋಚಿ ಪರಾರಿಯಾಗಿದ್ದಾರೆ.

ಒಂದು ವಾರದಿಂದ ಗೋಣಿಕೊಪ್ಪಲು ಭಾಗದಲ್ಲಿ ಪ್ರವಾಹ ಉಂಟಾಗಿದ್ದ ಕಾರಣಕ್ಕೆ ಮಾಲೀಕರು ಅಂಗಡಿ ಕಡೆ ಹೋಗಿರಲಿಲ್ಲ. ಇದನ್ನೇ ನೋಡಿಕೊಂಡು ಸ್ಕೆಚ್ ಹಾಕಿದ ಕಳ್ಳರು ಅಂಗಡಿಗಳಿಗೆ ಕನ್ನ ಹಾಕಲು ಉಪಾಯ ಮಾಡಿದ್ದಾರೆ. ಜಲಾವೃತಗೊಂಡಿದ್ದ ಅಂಗಡಿಗಳಿಗೆ ನುಗ್ಗಿ ಕೈಗೆಸಿಕ್ಕಿದ್ದನ್ನೆಲ್ಲಾ ದೋಚಿ ಎಸ್ಕೇಪ್ ಆಗಿದ್ದಾರೆ. ಅಂದಾಜು ಒಂದು ಲಕ್ಷಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳನ್ನು ಹಾಗೂ 20 ಸಾವಿರಕ್ಕೂ ಹೆಚ್ಚು ನಗದು ಹಣವನ್ನು ಕಳವು ಮಾಡಿದ್ದಾರೆ.

ಸದ್ಯ ಮಳೆ ಕಡಿಮೆಯಾಗಿ ಪ್ರವಾಹ ಇಳಿದಿರುವ ಹಿನ್ನೆಲೆ ಮಾಲೀಕರು ತಮ್ಮ ಅಂಗಡಿಗಳಿಗೆ ಹೋಗಿದ್ದಾಗ ಕಳ್ಳರ ಕೈಚಳಕ ಬೆಳಕಿಗೆ ಬಂದಿದೆ. ಬಳಿಕ ಈ ಬಗ್ಗೆ ಅಂಗಡಿ ಮಾಲೀಕರು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *