ಮಾಲ್‍ನಲ್ಲಿ ಪಟಾಕಿ ಸಿಡಿಸಿ 7 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಕದ್ದರು: ವಿಡಿಯೋ ನೋಡಿ

ವಾಷಿಂಗ್ಟನ್: ಖತರ್ನಾಕ್ ಕಳ್ಳರು ಮಾಲ್‍ನಲ್ಲಿ ಪಟಾಕಿ ಸಿಡಿಸುವ ಮೂಲಕ ಸಿನಿಮೀಯ ರೀತಿಯಲ್ಲಿ 7 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಕಳ್ಳತನ ಮಾಡಿರೋ ಘಟನೆ ಅಮೆರಿಕದ ಫ್ಲೋರಿಡಾದಲ್ಲಿನ ಸಿಟಿ ಆಫ್ ಸನ್‍ರೈಸ್‍ನಲ್ಲಿ ನಡೆದಿದೆ.

ಹೊಸ ವರ್ಷದ ಹಿಂದಿನ ದಿನ ಇಲ್ಲಿನ ಸಾಗ್ರಾಸ್ ಮಿಲ್ಸ್ ಮಾಲ್‍ನಲ್ಲಿ ಈ ಘಟನೆ ನಡೆದಿದೆ. ಪಟಾಕಿ ಶಬ್ದ ಕೇಳಿ ಅಲ್ಲಿದ್ದ ಜನ ಗುಂಡಿನ ದಾಳಿ ಎಂದುಕೊಂಡು ಗಾಬರಿಯಿಂದ ಅತ್ತಿತ್ತ ಓಡಿದ್ದಾರೆ. ಇದರ ಲಾಭ ಪಡೆದ ಕಳ್ಳರು ವಾಚ್‍ನೊಂದಿಗೆ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಿಟಿ ಆಫ್ ಸನ್‍ರೈಸ್ ಪೊಲೀಸ್ ಇಲಾಖೆ ಫೇಸ್‍ಬುಕ್ ಹಾಗೂ ಟ್ವಿಟ್ಟರ್‍ನಲ್ಲಿ ಇದರ ವಿಡಿಯೋವನ್ನ ಹಂಚಿಕೊಂಡಿದೆ.

ಇಲ್ಲಿನ ಝೇಲ್ಸ್ ಜ್ಯುವೆಲಿರಿ ಸ್ಟೋರ್‍ಗೆ ಬಂದ ಒಬ್ಬ ಕಳ್ಳ ವಾಚ್ ಖರೀದಿಸುವವನಂತೆ ಅಂಗಡಿಯ ಸಿಬ್ಬಂದಿಯೊಂದಿಗೆ ಮಾತನಾಡುತ್ತಾ ನಿಂತಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಸಿಬ್ಬಂದಿ 11,400 ಡಾಲರ್(ಅಂದಾಜು 7 ಲಕ್ಷ ರೂ.) ಮೌಲ್ಯದ ರೋಲೆಕ್ಸ್ ವಾಚ್ ತೋರಿಸಿದ್ದು, ಕಳ್ಳ ತನ್ನ ಕೈಗೆ ಅದನ್ನ ಹಾಕಿಕೊಂಡಿದ್ದಾನೆ. ಅತ್ತ ಮತ್ತೊಬ್ಬ ಕಳ್ಳ ಪಟಾಕಿ ಸಿಡಿಸಿದ್ದು, ಅದು ಗುಂಡಿನ ಶಬ್ದ ಎಂದುಕೊಂಡು ಅಂಗಡಿಯ ಸಿಬ್ಬಂದಿ ಸೇರಿದಂತೆ ಅಲ್ಲಿದ್ದ ಜನ ಎದ್ನೋ ಬಿದ್ನೋ ಅಂತ ಓಡಿದ್ದಾರೆ. ಈ ವೇಳೆ ಕೈಗೆ ವಾಚ್ ಧರಿಸಿದ್ದ ಕಳ್ಳ ಕೂಡ ವಾಚ್ ಸಮೇತ ಪರಾರಿಯಾಗಿದ್ದಾನೆ.

ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಒಂದು ಗಂಟೆಯ ಬಳಿಕ ಮಾಲ್ ಪುನಾರಂಭ ಮಡಲಾಯಿತು ಎಂದು ವರದಿಯಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

https://www.facebook.com/sunrisepolicefl/videos/1815049141870749/

Comments

Leave a Reply

Your email address will not be published. Required fields are marked *