ಖತರ್ನಾಕ್ ಕಳ್ಳರಿಂದ ಕೇವಲ 25 ಸೆಕೆಂಡ್‍ಗಳಲ್ಲಿ ಎರಡೂವರೆ ಲಕ್ಷ ಲೂಟಿ!

ಮಂಡ್ಯ: ಜನನಿಬಿಡ ಪ್ರದೇಶದಲ್ಲಿ ಕೇವಲ 25 ಸೆಕೆಂಡ್‍ಗಳಲ್ಲಿ ಖತರ್ನಕ್ ಕಳ್ಳರು ಎರಡೂವರೆ ಲಕ್ಷ ಹಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕಳ್ಳರ ಕೈಚಳಕದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

ನಗರದ ಹೊಳಲು ಸರ್ಕಲ್‍ನಲ್ಲಿ ಈ ಘಟನೆ ನಡೆದಿದೆ. ಗೊರವಾಲೆ ಗ್ರಾಮದ ಕೃಷ್ಣ ಎಂಬವರು ಹಣ ಕಳೆದುಕೊಂಡಿದ್ದಾರೆ. ಕೃಷ್ಣ ಅವರು ಆಗಸ್ಟ್ 9 ರಂದು 4 ಗಂಟೆ ಸುಮಾರಿಗೆ ಬ್ಯಾಂಕ್ ನಿಂದ ಒಂದೂವರೆ ಲಕ್ಷ ಹಣ ಡ್ರಾ ಮಾಡಿದ್ದಾರೆ. ಅಲ್ಲದೇ ಅವರ ಬಳಿ ಒಂದು ಲಕ್ಷ ಹಣವಿತ್ತು. ಹೀಗಾಗಿ ಒಟ್ಟು ಎರಡೂವರೆ ಲಕ್ಷ ಹಣವನ್ನು ತಮ್ಮ ಆಕ್ಟೀವಾ ಹೊಂಡಾದಲ್ಲಿ ಇಟ್ಟುಕೊಂಡು ಹೊಳಲು ಸರ್ಕಲ್‍ನಲ್ಲಿರುವ ದಿನಸಿ ಅಂಗಡಿಯ ಬಳಿ ಬಂದಿದ್ದರು.

ದಿನಸಿ ಅಂಗಡಿ ಮುಂದೆ ಆಕ್ಟೀವಾ ಹೊಂಡಾ ನಿಲ್ಲಿಸಿ ಮನೆಗೆ ಒಂದಷ್ಟು ದಿನಸಿ ಖರೀದಿಸಲು ಹೋಗಿದ್ದರು. ಕೃಷ್ಣ ಅವರನ್ನೇ ಪಾಲೋ ಮಾಡಿಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿಗಳು, ದಿನಸಿ ಸಾಮಾನು ಖರೀದಿಸುವುದರಲ್ಲೇ ಮಗ್ನರಾಗಿದ್ದ ಕೃಷ್ಣ ಅವರ ಸ್ಕೂಟರ್‍ನಿಂದ ಕೇವಲ 25 ಸೆಕೆಂಡ್‍ಗಳಲ್ಲಿ ಎರಡೂವರೆ ಲಕ್ಷ ಹಣ ದೋಚಿ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.

ಇದನ್ನ ನೋಡಿ ಸಾರ್ವಜನಿಕರೊಬ್ಬರು ನೀವು ಬಂದ ಸ್ಕೂಟರ್‍ನಿಂದ ಯಾರೋ ಏನನ್ನೋ ಕದ್ದುಕೊಂಡು ಹೋಗ್ತಿದ್ದಾರೆ ನೋಡಿ ಎಂದು ತಿಳಿಸಿದ್ದಾರೆ. ಕೂಡಲೇ ಕೃಷ್ಣ ತಮ್ಮ ಸ್ಕೂಟರ್ ಬಳಿ ಬಂದು ಪರೀಕ್ಷಿಸುವಷ್ಟರಲ್ಲಿ ಹಣದೊಂದಿಗೆ ಕಳ್ಳರು ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾರೆ.

ಐದು ಜನ ಪ್ಲಾನ್ ಮಾಡಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಜಿಲ್ಲೆಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *