ಉಡುಪಿ: ಜಿಲ್ಲೆಯ ಕುಂದಾಪುರದ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನವಾಗಿದ್ದು, ದೇವಸ್ಥಾನದ ಹಿಂಭಾಗದ ಬೀಗ ಮುರಿದು ಎರಡು ಬೆಳ್ಳಿ ಮುಖವಾಡವನ್ನು ಕದ್ದೊಯ್ದಿದ್ದಾರೆ.
ನಾಲ್ಕು ಕೆ.ಜಿ ತೂಕದ ಬೆಳ್ಳಿ ಮುಖವಾಡವನ್ನು ದೇವರಿಗೆ ತೊಡಲಾಗಿದ್ದು, ಅದನ್ನೇ ಕಿತ್ತು ತೆಗೆದುಕೊಂಡು ಹೋಗಿದ್ದಾರೆ. ದೇವಿ ಮತ್ತು ಗಣಪತಿ ವಿಗ್ರಹಕ್ಕೆ ಹಾಕಿದ್ದ ಬೆಳ್ಳಿ ಮುಖವಾಡ ಇದಾಗಿದೆ. ಕಳ್ಳರು ಗರ್ಭಗುಡಿ ಪ್ರವೇಶಿಸಲು ಯತ್ನಿಸಿದ್ದಾರೆ. ಆಗ ಸೈರನ್ ಮೊಳಗಿದೆ ಆದರೂ ಕಳ್ಳರು ದೇವಾಲಯದ ಹಿಂಭಾಗದ ಬೀಗ ಮುರಿದು ಬೆಳ್ಳಿ ಮುಖವಾಡ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಸೈರನ್ ಮೊಳಗಿದಾಗ ಅರ್ಚಕರ ಮನೆಯಿಂದ ಹೊರ ಬರಲು ಯತ್ನಿಸಿದ್ದಾರೆ. ಆದರೆ ಚಾಲಾಕಿ ಕಳ್ಳರು ಅರ್ಚಕರ ಮನೆಗೆ ಎರಡೂ ಕಡೆಯಿಂದ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ್ದರು. ಸೈರನ್ ಮೊಳಗಿದರೂ ಹೊರಗೆ ಬರಲಾಗದೆ ಅರ್ಚಕರು ಮತ್ತು ಸಿಬ್ಬಂದಿ ಮನೆಯೊಳಗೆ ಉಳಿಯಬೇಕಾಯ್ತು. ಸೈರನ್ ಸದ್ದಿಗೆ ಎಚ್ಚೆತ್ತ ಗ್ರಾಮಸ್ಥರಿಂದ ಕಳ್ಳರ ಹುಡುಕಾಟ ನಡೆದಿದೆ. ಆದರೆ ಕತ್ತಲಲ್ಲಿ ಕಳ್ಳರು ಕಣ್ಮರೆಯಾಗಿದ್ದಾರೆ.
ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಕಂಡ್ಲೂರು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಅಂದಾಜು 2 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದು, ದೇವಸ್ಥಾನದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಸಂಬಂಧ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply