ಉಮಾಮಹೇಶ್ವರಿ ದೇವಾಲಯದಲ್ಲಿ ಕಳ್ಳತನ – ದೇವಸ್ಥಾನಗಳೇ ಗ್ಯಾಂಗ್‍ನ ಟಾರ್ಗೆಟ್

ಮಡಿಕೇರಿ: ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮದ ಸಮೀಪದ ಕೊಳಕೇರಿ ಗ್ರಾಮದ ಉಮಾಮಹೇಶ್ವರಿ ದೇವಾಲಯದ ಗಣಪತಿ ವಿಗ್ರಹ, ಹುಂಡಿ, ಬೆಳ್ಳಿ ಚೆಂಬು ಮತ್ತು ಎರಡು ಬೆಳ್ಳಿ ತಟ್ಟೆಗಳನ್ನು ಕಳ್ಳರು ದೋಚಿರುವ ಪ್ರಕರಣ ಕಳೆದ ರಾತ್ರಿ ನಡೆದಿದೆ.

ಹುಂಡಿಯ ಬೀಗ ಮುರಿದು ಸುಮಾರು 40 ಸಾವಿರ ಹಣವನ್ನು ಕದ್ದಿರುವ ಕಳ್ಳರು, ಹೊರ ಭಾಗದಲ್ಲಿದ್ದ ಗಣಪತಿ ಗುಡಿಯ ಬೀಗ ಒಡೆದು ಒಳಗಿದ್ದ ಪಂಚಲೋಹದ ವಿಗ್ರಹವನ್ನು ಕದ್ದಿದ್ದಾರೆ.

ಮುಖ್ಯ ಗರ್ಭಗುಡಿಯ ಬೀಗ ಒಡೆದಿದ್ದು, ಅಲ್ಲಿದ್ದ ಬೆಳ್ಳಿಯ ಒಂದು ಚೆಂಬು ಮತ್ತು ಎರಡು ಬೆಳ್ಳಿ ತಟ್ಟೆಗಳನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ಆದರೆ ಗರ್ಭಗುಡಿಯಲ್ಲಿದ್ದ ಗಣಪತಿ ದೇವರ ಪಾಣಿಪೀಠ ಮತ್ತು ಪ್ರಭಾವಳಿಯನ್ನು ಅಲ್ಲಿಯೇ ಬಿಟ್ಟಿದ್ದು, ಮುಖ್ಯ ಗರ್ಭಗುಡಿಯಲ್ಲಿದ್ದ ಶಿವಲಿಂಗದ ಪ್ರಭಾವಳಿ ಮತ್ತು ಅಲ್ಲಿದ್ದ ಉತ್ಸವ ಮೂರ್ತಿಯ ಪ್ರಭಾವಳಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೋಗಿರುವುದು ಕಂಡು ಬಂದಿದೆ.

ಇಂದು ಬೆಳಗ್ಗೆ 6 ಗಂಟೆಗೆ ಮುಕ್ಕಾಟಿರ ಅಣ್ಣಯ್ಯ ಅವರು ದೇವಸ್ಥಾನಕ್ಕೆ ಆಗಮಿಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸುದ್ದಿ ಹಬ್ಬುತ್ತಿದ್ದಂತೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ರೆಮ್ಮಿ ನಾಣಯ್ಯ ಸೇರಿದಂತೆ ಎಲ್ಲಾ ಗ್ರಾಮಸ್ಥರು ದೇವಾಲಯದಲ್ಲಿ ಸೇರಿದರು.

ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ದಿವಾಕರ್, ಜಿಲ್ಲಾ ಅಪರಾಧ ಪತ್ತೆ ದಳದ ಎಎಸ್‍ಐ ಹಮೀದ್, ನಾಪೋಕ್ಲು ಠಾಣಾಧಿಕಾರಿ ಆರ್. ಮಂಚಯ್ಯ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಕಳೆದ 15 ದಿನಗಳ ಹಿಂದೆ ಮಡಿಕೇರಿ ನಗರದ ಐತಿಹಾಸಿಕ ದೇವಾಲಯ ಕರವಲೆ ಭಗವತಿ ದೇವಸ್ಥಾನಲ್ಲೂ ಇದೇ ರೀತಿ ಕಳ್ಳತನವಾಗಿತ್ತು.

Comments

Leave a Reply

Your email address will not be published. Required fields are marked *