ದಾಯಿರ ನುಡಿಸುತ್ತಾ ಬಂದ ಕಳ್ಳ ಫಕೀರ- ಮಂಕುಬೂದಿ ಎರಚಿ ಚಿನ್ನಕ್ಕೆ ಕನ್ನವಿಟ್ಟ

ಉಡುಪಿ: ಅಸಲಿ ಫಕೀರನಂತೆ ದಾಯಿರ ಬಾರಿಸಿಕೊಂಡು ಮನೆಗೆ ಬಂದ ಅಪರಿಚಿತ ವ್ಯಕ್ತಿ ಮಹಿಳೆಯೊಬ್ಬರಿಗೆ ವಂಚಿಸಿರೋ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ನಯಾಝ್ ಎಂಬವರ ಪತ್ನಿ ಆಯಿಷಾ ಮೋಸಕ್ಕೊಳಗಾದ ಮಹಿಳೆ. ಫಕೀರನ ವೇಷದಲ್ಲಿ ಹಣ ಬೇಡುತ್ತಾ ಮನೆಯಿಂದ ಮನೆಗೆ ಹೋದ ವಂಚಕ, ಆಯಿಷಾರನ್ನು ಮಾತಿನ ಮೋಡಿಗೆ ಸಿಲುಕಿಸಿ 8 ಪವನ್ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದಾನೆ.

ತಲೆಗೆ ಪೇಟ ತೊಟ್ಟು ಮನೆಗೆ ಫಕೀರನಂತೆ ಬಟ್ಟೆ ಧರಿಸಿ ದಾಯಿರ ಬಾರಿಸಿ ಕೊಂಡು ಬಂದ ಅಪರಿಚಿತ ವ್ಯಕ್ತಿಗೆ ಆಯಿಷಾ 20 ರೂ ನೀಡಲು ಹೋಗಿದ್ದಾರೆ. ಆ ವೇಳೆ ಆತ ನೀವು ತುಂಬಾ ಕಷ್ಟದಲ್ಲಿದ್ದೀರಿ. ನಿಮಗೆ ಮತ್ತು ನಿಮ್ಮ ಗಂಡನಿಗೆ ಯಾರೋ ಮಾಟ ಮಾಡಿದ್ದಾರೆ. ಯಾರೋ ನಿಮ್ಮ ಕುಟುಂಬಕ್ಕೆ ಕೇಡು ಬಯಸಿದ್ದಾರೆ. ನಾನು ಮನೆಯ ಒಳಗೆ ಬಂದು ಆ ಕೇಡು ಬಯಸಿದವರು ಯಾರೆಂದು ತೋರಿಸುತ್ತೇನೆ ಅಂತ ಹೇಳುತ್ತಾ ಡೈಲಾಗ್ ಬಿಟ್ಟಿದ್ದಾನೆ. ಈತನ ನಾಟಕದ ಮಾತಿಗೆ ಮನೆಯೊಡತಿ ಮರುಳಾಗಿದ್ದಾರೆ.

ಮನೆಯೊಳಗೆ ಬಂದ ವ್ಯಕ್ತಿ, ನಿಮ್ಮಲ್ಲಿರುವ ಚಿನ್ನವನ್ನು ನೋಡೋಣ ಅಂತ ಹೇಳಿದ್ದಾನೆ. ಮನೆಯಲ್ಲಿದ್ದ ಎಂಟು ಪವನ್ ಚಿನ್ನವನ್ನು ಆಯಿಷಾ ತಂದಿದ್ದಾರೆ. ಬಳಿಕ ಆತ ಆಯಿಷಾರ ಮುಖಕ್ಕೆ ನೀರು ಚಿಮುಕಿಸಿದ್ದಾನೆ. ಚಿನ್ನವನ್ನು ಮಡಕೆಯಲ್ಲಿ ಇಟ್ಟಿರುತ್ತೇನೆ ಎಂದು ಹೇಳಿ ಮಡಕೆಗೆ ಕೆಂಪು ನೂಲನ್ನು ಸುತ್ತಿದ್ದಾನೆ. ಮಡಕೆ ವಾಪಾಸ್ ಕೊಟ್ಟು ಮನೆಯಿಂದ ಹೋಗಿದ್ದಾನೆ.

ಸ್ವಲ್ಪಹೊತ್ತಿನ ನಂತರ ಆಯಿಷಾ ಮಡಿಕೆಯನ್ನು ನೋಡುವಾಗ ಅದರಲ್ಲಿ ಚಿನ್ನ ಮಾಯವಾಗಿದೆ. ಕೂಡಲೇ ಅವರು ಈ ಬಗ್ಗೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇಲೆ ಪೊಲೀಸರು ಸಿಸಿಟಿವಿ ಪರಿಶೀಲಿಸಿ ವಂಚಿಸಿದ ಫಕೀರನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *