ಕಳ್ಳತನಕ್ಕೆಂದು ಹೋಗಿ ಯುವತಿಯನ್ನು ಕೊಚ್ಚಿ ಕೊಂದ

ಡೆಹ್ರಾಡೂನ್: ಕಳ್ಳತನಕ್ಕೆಂದು ಹೋದ ಕಳ್ಳನೊಬ್ಬ ಯುವತಿಯನ್ನು ಕೊಚ್ಚಿ ಕೊಂದ ಘಟನೆಯೊಂದು ಶುಕ್ರವಾರ ಉತ್ತರಾಖಂಡದ ಉದಮ್‍ಸಿಂಗ್ ನಗರದಲ್ಲಿ ನಡೆದಿದೆ.

ಪಿಂಕಿ ರಾವತ್(22) ಕೊಲೆಯಾದ ಯುವತಿ. ಮೂಲತಃ ಪೌರಿ ಗರ್ವಾಲ್ ಜಿಲ್ಲೆಯವಳಾಗಿರುವ ಪಿಂಕಿ, ತನ್ನ ಅಣ್ಣನ ಜೊತೆ ಕಾಶಿಪುರದಲ್ಲಿರುವ ಚಿಕ್ಕಮ್ಮನ ಮನೆಯಲ್ಲಿ ವಾಸಿಸುತ್ತಿದ್ದಳು. ಪಿಂಕಿ ಮೊಬೈಲ್ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಳು.

ಶುಕ್ರವಾರ ಮಧ್ಯಾಹ್ನ ಸುಮಾರು 12.30ಕ್ಕೆ ಪಿಂಕಿ ಮೊಬೈಲ್ ಅಂಡಗಿಯಲ್ಲಿ ಒಂಟಿ ಆಗಿದ್ದಳು. ಸ್ವಲ್ಪ ಹೊತ್ತಿನಲ್ಲೇ ಅಂಗಡಿ ಮಾಲೀಕ ಬರಬೇಕಾಗಿತ್ತು. ಈ ವೇಳೆ ಕಳ್ಳತನಕ್ಕೆಂದು ಅಂಗಡಿಗೆ ಬಂದ ಕಳ್ಳ ಯುವತಿಯನ್ನು ನೋಡಿದ್ದಾನೆ. ಬಳಿಕ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಕಳ್ಳ ಅಂಗಡಿಗೆ ಬಂದು ಮೊಬೈಲ್ ಬೆಲೆ ಕೇಳುವ ರೀತಿ ನಾಟಕವಾಡಿದ್ದಾನೆ. ಆದರೆ ಪಿಂಕಿಗೆ ಮೊಬೈಲ್ ಬೆಲೆ ಗೊತ್ತಿರಲಿಲ್ಲ. ಹಾಗಾಗಿ ಆಕೆ ತನ್ನ ಮಾಲೀಕನಿಗೆ ಕರೆ ಮಾಡಿ ಮಾಹಿತಿ ಕೇಳಿದ್ದಾಳೆ ಎಂದು ಕಾಶಿಪುರದ ಎಸ್‍ಎಚ್‍ಒ ಅಧಿಕಾರಿ ಚಂದ್ರ ಮೋಹನ್ ಸಿಂಗ್ ತಿಳಿಸಿದ್ದಾರೆ.

ಪಿಂಕಿ ಮಾಲೀಕನಿಗೆ ಕರೆ ಮಾಡಿದಾಗ ಆತ ಐದು ನಿಮಿಷದಲ್ಲಿ ಅಂಗಡಿಗೆ ಬರುವುದಾಗಿ ಹೇಳಿದ್ದರು. ಬಳಿಕ ಅಂಗಡಿಗೆ ಬಂದು ನೋಡಿದಾಗ ಪಿಂಕಿ ಕುತ್ತಿಗೆಯನ್ನು ಚಾಕುವಿನಿಂದ ಇರಿಯಲಾಗಿತ್ತು. ಪರಿಣಾಮ ಆಕೆ ತೀವ್ರ ರಕ್ತಸ್ರಾವವಾಗಿ ಕೆಳಗೆ ಬಿದ್ದು ನರಳಾಡುತ್ತಿದ್ದಳು.

ಈ ಬಗ್ಗೆ ಮಾಲೀಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಆರೋಪಿ ಒಂದೂವರೆ ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಯುವತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲಿ ಪಿಂಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸರು ಆರೋಪಿಯನ್ನು ಕಂಡು ಹಿಡಿಯಲು ಸ್ಥಳದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಪೊಲೀಸರು ತಂಡವನ್ನು ರಚಿಸಿ ಪರಾರಿಯಾಗಿರುವ ಆರೋಪಿಯನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *