ಬ್ಯಾಂಕ್ ವಿಲೀನದಿಂದ ಉದ್ಯೋಗದಲ್ಲಿ ಕಡಿತವಾಗುವುದಿಲ್ಲ: ನಿರ್ಮಲಾ ಸೀತಾರಾಮನ್

ಚೆನ್ನೈ: ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ವಿಲೀನ ಮಾಡುವುದರಿಂದ ಯಾವುದೇ ಉದ್ಯೋಗ ಕಡಿತವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್ ವಿಲೀನದಿಂದ ಉದ್ಯೋಗ ಕಡಿತವಾಗತ್ತೆ ಎನ್ನುವುದು ಸಂಪೂರ್ಣ ಸುಳ್ಳು ಮಾಹಿತಿ. ಶುಕ್ರವಾರವೇ ಈ ಕುರಿತು ನಾನು ಸ್ಪಷ್ಟಪಡಿಸಿದ್ದೇನೆ. ಬ್ಯಾಂಕ್‍ಗಳನ್ನು ವಿಲೀನಗೊಳಿಸುವುದರಿಂದ ಉದ್ಯೋಗಿಗಳಿಗೆ ಹಾನಿಯಾಗುವುದಿಲ್ಲ. ಒಬ್ಬ ಉದ್ಯೋಗಿಯನ್ನೂ ಕೆಲಸದಿಂದ ತೆಗೆದು ಹಾಕುವುದಿಲ್ಲ ಎಂಬ ಅಂಶವನ್ನು ಮಾಧ್ಯಮಗಳ ಮೂಲಕ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಪುನರುಚ್ಛರಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 30ರಂದು 10 ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ನಾಲ್ಕು ಬ್ಯಾಂಕ್‍ಗಳಿಗೆ ವಿಲೀನಗೊಳಿಸಿರುವ ಕುರಿತು ಘೋಷಣೆ ಮಾಡಿದ್ದರು. ಐದು ವರ್ಷಗಳ ಆರ್ಥಿಕತೆಯ ಕುಂಟಿತವನ್ನು ಸರಿ ದಾರಿಗೆ ತಂದು, ಬೆಳೆವಣಿಗೆಯತ್ತ ಕೊಂಡೊಯ್ಯಬೇಕು. ಹೀಗಾಗಿ ಸಣ್ಣ ಬ್ಯಾಂಕ್‍ಗಳನ್ನು ವಿಲೀನಗೊಳಿಸಿ ಬೃಹತ್ ಬ್ಯಾಂಕ್‍ಗಳನ್ನಾಗಿ ಮಾಡಿ, ವಿಶ್ವ ದರ್ಜೆಗೆ ಕೊಂಡೊಯ್ಯಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

ಇದರ ಭಾಗವಾಗಿ ರಾಜ್ಯದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳನ್ನು ಸಹ ವಿಲೀನ ಮಾಡಲಾಗುತ್ತಿದೆ. ಈ ಕುರಿತು ಆಗಸ್ಟ್ 30ರಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ನಿರ್ಮಲಾ ಸೀತಾರಾಮನ್ ಅವರು, 2017ರಲ್ಲಿ 17 ಸಾರ್ವಜನಿಕ ವಲಯದ ಬ್ಯಾಂಕ್‍ಗಳಿದ್ದವು. ಇದನ್ನು 13ಕ್ಕೆ ಇಳಿಸುವ ನಿಟ್ಟಿನಲ್ಲಿ ಈ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದರು.

ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ವಿಲೀನವಾದರೆ ಇಂಡಿಯನ್ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕ್ ವಿಲೀನವಾಗಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ವಿಲೀನವಾಗಲಿವೆ.

ವಸೂಲಾಗದ ಸಾಲ(ಎನ್‍ಪಿಎ)ದ ಪ್ರಮಾಣ 8.65 ಲಕ್ಷ ಕೋಟಿ ರೂ.ನಿಂದ 7.90 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗುರಿ ತಲುಪಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ 10 ಬ್ಯಾಂಕ್‍ಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದರು.

Comments

Leave a Reply

Your email address will not be published. Required fields are marked *