ಸಿದ್ದರಾಮಯ್ಯ ಹೃದಯದಲ್ಲಿ ಬಡವರು ಮಾತ್ರ ಇದ್ದಾರೆ-ಕೆ.ಸಿ ವೇಣುಗೋಪಾಲ್

ಉಡುಪಿ: ಸಿದ್ದರಾಮಯ್ಯ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಸಿಎಂ ಹೃದಯದಲ್ಲಿ ಬಡವರು ಮಾತ್ರ ಇದ್ದಾರೆ. ಇದು ರಾಜ್ಯದ ಜನಕ್ಕೆ ಅರ್ಥವಾಗಬೇಕು. ಅರ್ಥ ಮಾಡಿಸುವ ಕೆಲಸವನ್ನು ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ಮಾಡಬೇಕು ಅಂತ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.

ಮನೆ ಮನೆ ಕಾಂಗ್ರೆಸ್ ಅಭಿಯಾನದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಹಣಿಯಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಸಚಿವ ಎಂ.ಬಿ ಪಾಟೀಲ್ ಫೋನ್ ಕದ್ದಾಲಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದರು. ಗುಜರಾತ್‍ನಲ್ಲೂ ಇಂತಹ ಆರೋಪ ಕೇಳಿಬಂದಿದೆ. ಫೋನ್ ಟ್ಯಾಪಿಂಗ್ ಮಾಡಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಸಿಬಿಐ, ಇಡಿ, ಎನ್‍ಐಎ ಎಲ್ಲಾ ಇಲಾಖೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಗುಡುಗಿದರು.

ಕೇಂದ್ರ ಸರ್ಕಾರ ಈ ರೀತಿಯ ನಡವಳಿಕೆಯನ್ನು ನಿಲ್ಲಿಸಬೇಕು. ಪರಿವರ್ತನಾ ಯಾತ್ರೆ ಬಗ್ಗೆ ಕಾಂಗ್ರೆಸ್ ತಲೆಕೆಡಿಕೊಳ್ಳುವುದಿಲ್ಲ. ಅವರು ಯಾತ್ರೆ ಮಾಡುತ್ತಿರಲಿ. ಏನೇ ಮಾಡಿದ್ರೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ. ನೋಟ್ ಬ್ಯಾನ್ ಬಗ್ಗೆ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂದೇ ತನ್ನ ದೃಷ್ಟಿಕೋನವನ್ನು ತಿಳಿಸಿದ್ದರು. ಅದು ಇಂದು ಸತ್ಯವಾಗುತ್ತಿದೆ ಎಂದು ಹೇಳಿದರು.

ನೋಟ್ ಬ್ಯಾನ್ ಒಂದು ಅನ್ಯಾಯದ ಮತ್ತು ವ್ಯವಸ್ಥಿತವಾದ ಲೂಟಿ. ನಗದು ಅಪಮೌಲೀಕರಣದಿಂದ ಯುವಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಕಳಪೆ ನಡೆಯಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು. ಚುನಾವಣೆಗೆ ಇನ್ನು ನಾಲ್ಕೇ ತಿಂಗಳು ಇದೆ. ಅಧಿಕಾರದ ಅಮಲಿನಲ್ಲಿ ಇರದೆ ಮುಂದಿನ ಚುನಾವಣೆಯ ಬಗ್ಗೆ ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಕಾಂಗ್ರೆಸ್ ಹತ್ತಾರು ಯೋಜನೆಗಳನ್ನು ಕೊಟ್ಟಿದೆ. ಅದನ್ನು ಮನೆ ಮನೆಗೆ ಮುಟ್ಟಿಸಬೇಕು ಎಂದರು.

Comments

Leave a Reply

Your email address will not be published. Required fields are marked *