ದಾವಣಗೆರೆ: ಬಿಜೆಪಿ ಸಂಸದರ ಸ್ವಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರೇ ನಾಪತ್ತೆಯಾಗಿದ್ದು, ಚಿಕಿತ್ಸೆ ಸಿಗದೆ ರೋಗಿಗಳು ಹೈರಾಣರಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಅರಸೀಕೆರೆ ಗ್ರಾಮ ಬಳ್ಳಾರಿಯ ಬಿಜೆಪಿ ಸಂಸದ ದೇವೇಂದ್ರಪ್ಪನವರ ಸ್ವಗ್ರಾಮ. ಆದರೂ ಕೂಡ ಈ ಗ್ರಾಮದ ದುಸ್ಥಿತಿ ಕೇಳುವವರೇ ಇಲ್ಲ. ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ಇದೆ.

ಬುಧವಾರ ರಾತ್ರಿ ಕೆರೆಗುಡಿಹಳ್ಳಿ ಗ್ರಾಮದ ಯಂಕಮ್ಮ ಬೆನ್ನು ಮೂಳೆ ಮುರಿದುಕೊಂಡಿದ್ದರು. ಆದ್ದರಿಂದ ಚಿಕಿತ್ಸೆಗಾಗಿ ಅರಸೀಕೆರೆ ಸಮುದಾಯದ ಆರೋಗ್ಯ ಕೇಂದ್ರಕ್ಕೆ ರಾತ್ರಿ ಬಂದಿದ್ದರು. ಆದರೆ ಅತ್ತ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದೆ, ಇತ್ತ ಕೊನೆ ಪಕ್ಷ ಪ್ರಥಮ ಚಿಕಿತ್ಸೆ ನೀಡುವ ಯಾವುದೇ ಸಿಬ್ಬಂದಿ ಕೂಡ ಇಲ್ಲದೆ ಮಹಿಳೆ ನರಳಾಡಿದ್ದಾರೆ.
ನರಳಾಡುತ್ತಿರುವ ತಾಯಿಯನ್ನು ನೋಡಲಾಗದೆ, ಮಕ್ಕಳು ಸೆಲ್ಫಿ ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಮ್ಮ ತಾಯಿ ನರಳಾಡುತ್ತಿದ್ದರೂ ಯಾರೂ ಕೂಡ ಇಲ್ಲಿಗೆ ಬಂದು ಚಿಕಿತ್ಸೆ ನೀಡುತ್ತಿಲ್ಲ. ವೈದ್ಯರು ಸಹ ಇಲ್ಲ. ನಮಗೆ ಯಾರೂ ಚಿಕಿತ್ಸೆ ನೀಡುತ್ತಾರೆ? ಖಾಸಗಿ ಆಸ್ಪತ್ರೆಗೆ ಹೋಗಲು, ಜಿಲ್ಲಾ ಕೇಂದ್ರಕ್ಕೆ ಹೋಗಲು ನಮ್ಮ ಬಳಿ ಹಣವಿಲ್ಲ. ಇತ್ತ ಸಮುದಾಯ ಕೇಂದ್ರ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಈಗ ನಮ್ಮ ಪರಿಸ್ಥಿತಿ ಏನು ಎಂದು ತಮ್ಮ ಆಳಲನ್ನು ಹೇಳಿಕೊಂಡಿದ್ದಾರೆ.

ಹೆಸರಿಗೆ ಮಾತ್ರ ಇದು ಸಂಸದ ದೇವೇಂದ್ರಪ್ಪ ಅವರ ಸ್ವಗ್ರಾಮ. ಆದರೆ ಇಲ್ಲಿನ ಸಮುದಾಯ ಕೇಂದ್ರ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಇರಲಿ, ರೋಗಿಗಳಿಗೆ ಪ್ರಥಮ ಚಿಕಿತ್ಸೆ ಕೊಡಲು ಕೂಡ ಯಾರು ಇಲ್ಲ. ಈಗಲಾದರೂ ಅಧಿಕಾರಿಗಳು, ಸಂಸದರು ಗಮನಕೊಟ್ಟು ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೌಲಭ್ಯ ಒದಗಿಸಬೇಕು. ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave a Reply