ಒಂದೇ ರಾತ್ರಿ 3 ಹಳ್ಳಿಗಳಲ್ಲಿ 24 ಮೇಕೆಗಳ ಕಳ್ಳತನ

ರಾಮನಗರ: ರೇಷ್ಮೆನಗರಿ ರಾಮನಗರದ ಹೊರವಲಯದ ಮೂರು ಹಳ್ಳಿಗಳಲ್ಲಿ ಒಂದೇ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿದ್ದು, ಬರೋಬ್ಬರಿ 24 ಮೇಕೆಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ರಾಮನಗರ ತಾಲೂಕಿನ ಮಾಯಗಾನಹಳ್ಳಿಯ ಮಂಜು ಎಂಬವರಿಗೆ ಸೇರಿದ 9 ಮೇಕೆಗಳು, ಕೆಂಜಗಾರಹಳ್ಳಿಯ ಮುತ್ತುರಾಜು ಎಂಬವರಿಗೆ ಸೇರಿದ 14 ಮೇಕೆಗಳು ಹಾಗೂ ಕೇತೋಹಳ್ಳಿಯ ವ್ಯಕ್ತಿಯೊಬ್ಬರ ಒಂದು ಮೇಕೆ ಕಳ್ಳತನ ಮಾಡಲಾಗಿದೆ.

ಕೃಷಿ ಜೊತೆಗೆ ಮೇಕೆ ಸಾಕಾಣಿಕೆ ಮಾಡುತ್ತಿದ್ದ ರೈತರು ಒಂದೇ ರಾತ್ರಿಯಲ್ಲಿ ನಡೆದಿರುವ ಕಳ್ಳತನದಿಂದ ಸಾಕಷ್ಟು ಆತಂಕಗೊಂಡಿದ್ದಾರೆ. ಜೊತೆಗೆ ಜೀವನೋಪಾಯಕ್ಕಾಗಿ ಸಾಕಾಣಿಕೆ ಮಾಡಿದ್ದ ಮೇಕೆಗಳು ಕಳುವಾಗಿರೋದು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ಹಬ್ಬ-ಹರಿದಿನ, ಜಾತ್ರೆ ವೇಳೆ ಮೇಕೆ ಕಳ್ಳತನ
ಜಿಲ್ಲೆಯ ಹಲವೆಡೆ ಹಳ್ಳಿಗಳಲ್ಲಿ ಗ್ರಾಮ ದೇವತೆಗಳ ಅಗ್ನಿಕೊಂಡ ಜಾತ್ರಾ ಮಹೋತ್ಸವ ನಡೆದಿದೆ. ಜೊತೆಗೆ ಮಂಗಳವಾರ ಮಾಂಸ ನೈವೇದ್ಯ ಸಹ ಇದ್ದು, ತಮ್ಮ ಸಂಬಂಧಿಕರಿಗೆ ಮಾಂಸಾಹಾರ ಬಡಿಸುವುದು ಸಾಮಾನ್ಯವಾಗಿತ್ತು. ಮಟಲ್ ಸ್ಟಾಲ್‍ಗಳಲ್ಲಿ ಮಟನ್ ದರ ಕೆ.ಜಿ. 600ರೂ. ಏರಿಕೆಯಾಗಿದ್ದು, ಕಳ್ಳರು ಮೇಕೆ ಕದ್ದು ಮಾಂಸ ಮಾರಾಟ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ.

ರಾತ್ರೋರಾತ್ರಿ ಕೊಟ್ಟಿಗೆಗಳಲ್ಲಿದ್ದ ಮೇಕೆಗಳು ಕಳ್ಳರ ಕೈಚಳಕದಿಂದ ಮಾಯವಾಗಿರೋದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *