ಜೆಡಿಎಸ್ ಪರ ಪ್ರಚಾರ ಮಾಡಲು ಬಂದಿದ್ದ ಮಾಜಿ ಸಚಿವರನ್ನು ವಾಪಸ್ ಕಳುಹಿಸಿದ ಗ್ರಾಮಸ್ಥರು!

ಮಂಡ್ಯ: ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ ಮಾಜಿ ಸಚಿವ ವಿಶ್ವನಾಥ್ ಅವರಿಗೆ ಪ್ರಚಾರ ಮಾಡುವುದಕ್ಕೆ ಅಡ್ಡಿ ಪಡಿಸಿ ಗ್ರಾಮದಿಂದ ವಾಪಸ್ ಕಳುಹಿಸಿರುವ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಈ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಏಪ್ರಿಲ್ 12 ರಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಅನ್ನದಾನಿ ಪರವಾಗಿ ಪ್ರಚಾರ ಕೈಗೊಂಡಿದ್ದ ಹೆಚ್ ವಿಶ್ವನಾಥ್, ತಾಲೂಕಿನ ಮಂಚನಹಳ್ಳಿಗೆ ಆಗಮಿಸಿದ್ದರು. ಈ ವೇಳೆ ಅವರ ಕಾರನ್ನು ಅಡ್ಡ ಹಾಕಿದ ಗ್ರಾಮಸ್ಥರು, ಗ್ರಾಮದ ಒಳಗಡೆ ಬರಲು ಬಿಡದೆ ವಾಪಸ್ ಕಳುಹಿಸಿದ್ದಾರೆ.

ಆದ್ರೆ ವಿಶ್ವನಾಥ್ ಅವರನ್ನು ಯಾವ ಕಾರಣಕ್ಕೆ ಪ್ರಚಾರ ಮಾಡಲು ಬಿಡದೆ ವಾಪಸ್ ಕಳುಹಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಗ್ರಾಮಸ್ಥರ ಮಾತಿಗೆ ಮರು ಮಾತನಾಡದ ಹೆಚ್ ವಿಶ್ವನಾಥ್ ಅಲ್ಲಿಂದ ಕಾರ್ ಹತ್ತಿ ವಾಪಸ್ ಹೋಗಿದ್ದಾರೆ ಎನ್ನಲಾಗಿದೆ.

ವಿಶ್ವನಾಥ್ ಕಾರ್ ಹತ್ತುತ್ತಿದ್ದಂತೆ ಶಾಸಕ ನರೇಂದ್ರಸ್ವಾಮಿ ಪರವಾಗಿ ಕೆಲವು ಯುವಕರು ಘೋಷಣೆ ಕೂಗುತ್ತಾರೆ. ಇದನ್ನ ನೋಡಿದ ಅಭ್ಯರ್ಥಿ ಅನ್ನದಾನಿ ಬೆಂಬಲಿಗರೂ ಸಹ ಹೆಚ್ ವಿಶ್ವನಾಥ್ ಗೆ ಜೈ ಕಾರ ಹಾಕುತ್ತಾರೆ. ಈ ನಡುವೆ ಸ್ಥಳದಲ್ಲಿದ್ದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಈಗ ಈ ವಿಡಿಯೋ ವಾಟ್ಸಪ್ ಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗ ಲಭಿಸಿದೆ.

Comments

Leave a Reply

Your email address will not be published. Required fields are marked *