ಕಾರು ಕದಿಯಲು ಬಂದ ಕಳ್ಳನನ್ನು ಹಿಡಿದು ಥಳಿಸಿದ ಗ್ರಾಮಸ್ಥರು

ಬೆಂಗಳೂರು: ಕಾರು ಕದಿಯಲೆಂದು ಬಂದಿದ್ದ ಖದೀಮನಿಗೆ ಗ್ರಾಮಸ್ಥರೇ ಹಿಡಿದು ಥಳಿಸಿದ ಘಟನೆ ನಗರದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ.

ತಮಿಳುನಾಡು ಮೂಲದ ಮಾಣಿಕನಂದನ್ ಎಂಬಾತನೇ ಸಿಕ್ಕಿಬಿದ್ದ ಕಳ್ಳ. ಚಂದಾಪುರದ ಧರಣೇಶ ಬೇಕರಿ ಮುಂಭಾಗದಲ್ಲಿ ನಿಲ್ಲಿಸಿದ್ದ ಕಾರನ್ನು ಕಳ್ಳತನ ಮಾಡಬೇಕೆಂದು ಕಾರಿನೊಳಕ್ಕೆ ಹೋಗಿ ಸ್ಟಾರ್ಟ್ ಮಾಡಿದ್ದಾನೆ. ಆಗ ಕಾರಿಗೆ ಅಳವಡಿಸಲಾಗಿದ್ದ ಸೈರನ್ ಶಬ್ಧ ಮಾಡತೊಡಗಿದೆ. ತಕ್ಷಣ ಬೇಕರಿಯೊಳಗಿದ್ದ ಮಾಲೀಕ ಪರಮಶಿವ ಎಂಬವರು ಎದ್ದು ಓಡಿ ಬಂದಿದ್ದಾರೆ.

ಮಾಲೀಕ ಬರುತ್ತಿದ್ದಂತೆಯೇ ಕಳ್ಳ ಗಾಬರಿಯಲ್ಲಿ ಎದುರಿಗಿದ್ದ ಫ್ಲೈ ಓವರ್‍ಗೆ ಗುದ್ದಿ ಕಾರು ಜಖಂ ಆಗಿದೆ. ಅಷ್ಟರಲ್ಲಿ ಸುತ್ತಮುತ್ತಲಿನ ಜನ ಸೇರಿ ಕಳ್ಳನನ್ನು ಹಿಡಿದಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಇದೇ ಪ್ರದೇಶದಲ್ಲಿ ಸ್ಯಾಂಟ್ರೋ ಕಾರು ಮತ್ತು ಬೊಲೆರೊ ಜೀಪು ಕಳ್ಳತನವಾಗಿತ್ತು. ಅವು ಕರ್ನಾಟಕದ ಗಡಿ ಅತ್ತಿಬೆಲೆಯ ಟೋಲ್ ನಲ್ಲಿ ಪಾಸ್ ಆಗಿದ್ದ ವಿಡಿಯೋ ಫೂಟೇಜ್ ಸಹ ಸಿಕ್ಕಿವೆ. ಆದರೂ ಪೊಲೀಸರಿಗೆ ಕಳ್ಳರನ್ನು ಹಿಡಿಯಲಾಗಲಿಲ್ಲ ಎಂದು ಸ್ಥಳೀಯರ ಆರೋಪಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *