ಮೊದಲ ಶಾಸಕಾಂಗ ಸಭೆಯಲ್ಲೇ ಕೈ ನಾಯಕರ ಅಸಮಾಧಾನ ಸ್ಫೋಟ!

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮೊದಲ ಶಾಸಕಾಂಗ ಸಭೆಯಲ್ಲೇ ಭಾರೀ ಅಸಮಾಧಾನ ಸ್ಫೋಟಗೊಂಡಿದೆ. ಕೆಲ ಕಾಂಗ್ರೆಸ್ ಮುಖಂಡರು ಪಕ್ಷದ ನಾಯಕರ ನಿರ್ಧಾರಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಚುನಾವಣೆಯ ಬಳಿಕ ಜೆಡಿಎಸ್ ನೊಂದಿಗೆ ಮೈತ್ರಿ ರಾಜಕಾರಣಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಇಂದು ಪಕ್ಷದ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಯಿತು. ಈ ವೇಳೆ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ಬಂದಾಗ ಕೆಲ ಶಾಸಕರು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಚುನಾವಣೆಯ ಟಿಕೆಟ್ ಹಂಚಿಕೆ ವೇಳೆ ಕೆಲ ಕಡೆ ಗೆಲ್ಲುವ ಅಭ್ಯರ್ಥಿಗಳಿದ್ದರೂ ಅಂತಹವರಿಗೆ ಟಿಕೆಟ್ ನೀಡಿಲ್ಲ. ಕೇವಲ ಪ್ರಭಾವಿ ನಾಯಕರ ಹಿಂಬಾಲಕರಿಗೆ ಟಿಕೆಟ್ ನೀಡಲಾಗಿತ್ತು ಎಂದು ಶಾಸಕರು ಆರೋಪಿಸಿದ್ದಾರೆ. ಇದು ಕಾಂಗ್ರೆಸ್ ಪಾಲಿಗೆ ದೊಡ್ಡ ತಪ್ಪಾಗಿದ್ದು, ಇದರಿಂದಾಗಿಯೇ ಪಕ್ಷಕ್ಕೆ ಈ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನು ಓದಿ: ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿಎಂ ಕಣ್ಣೀರು!

ಸಭೆಯಲ್ಲಿ ಪಕ್ಷಕ್ಕೆ ಬಹುಮತ ತರಲು ವಿಫಲರಾಗಿ ಸಿಎಂ ಸಿದ್ದರಾಮಯ್ಯ ಅವರು ಕಣ್ಣೀರು ಹಾಕಿದ್ದ ವೇಳೆಯೇ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದ ಹಲವು ಸಚಿವರು ಚುನಾವಣೆಯಲ್ಲಿ ಈ ಬಾರಿ ಗೆಲುವು ಪಡೆಯುವಲ್ಲಿ ವಿಫಲರಾಗಿದ್ದಾರೆ.

ಪ್ರಮುಖವಾಗಿ ಸಚಿವೆ ಉಮಾಶ್ರೀ(ತೇರದಾಳ), ಎಚ್ ಎಂ ರೇವಣ್ಣ(ಚನ್ನಪಟ್ಟಣ), ಎಚ್ ಆಂಜನೇಯ (ಹೊಳಲ್ಕೆರೆ), ಎಚ್‍ಚಿ ಮಹದೇವಪ್ಪ (ಟಿ.ನರಸಿಪುರ), ಸಂತೋಷ್ ಲಾಡ್(ಕಲಘಟಗಿ), ವಿನಯ್ ಕುಲಕರ್ಣಿ (ಧಾರವಾಡ), ಗೀತಾಮಹದೇವ ಪ್ರಸಾದ್ (ಗುಂಡ್ಲುಪೇಟೆ), ರಮಾನಾಥ ರೈ (ಬಂಟ್ವಾಳ), ರುದ್ರಪ್ಪ ಲಮಾಣಿ (ಹಾವೇರಿ), ಪ್ರಮೋದ್ ಮಧ್ವರಾಜ್ (ಉಡುಪಿ), ಎ ಮಂಜು(ಅರಕಲಗೂಡು), ಟಿಬಿ ಜಯಚಂದ್ರ (ಶಿರಾ), ಶರಣ ಪ್ರಕಾಶ್ ಪಾಟೀಲ್ (ಸೇಡಂ), ಕಾಗೋಡು ತಿಮ್ಮಪ್ಪ (ಸಾಗರ), ಕೆಬಿ ಕೋಳಿವಾಡ (ರಾಣೆಬೆನ್ನೂರು), ಎಸ್ ಎಸ್ ಮಲ್ಲಿಕಾರ್ಜನ (ದಾವಣಗೆರೆ ಉತ್ತರ), ಬಸವರಾಯ ರೆಡ್ಡಿ (ಯಲಬುರ್ಗಾ) ಸೇರಿದಂತೆ ಒಟ್ಟು 17 ಸಚಿವರು ಈ ಬಾರಿ ಸೋಲಪ್ಪಿಕೊಂಡಿದ್ದಾರೆ. ಇದನ್ನು ಓದಿ: ಜೆಡಿಎಸ್ ಶಾಸಕರಿಗೆ 100 ಕೋಟಿ, ಸಚಿವ ಸ್ಥಾನದ ಆಫರ್ ಬಿಜೆಪಿ ಕೊಟ್ಟಿದೆ: ಕುಮಾರಸ್ವಾಮಿ

Comments

Leave a Reply

Your email address will not be published. Required fields are marked *