ಮಾಧ್ಯಮ ಪ್ರತಿನಿಧಿಗಳಿಗೆ ಧಮ್ಕಿ ಹಾಕಿದ ವ್ಯಕ್ತಿ ಮಾನಸಿಕ ಅಸ್ವಸ್ಥ: ಶಾಸಕ ರಾಜು ಕಾಗೆ

ಚಿಕ್ಕೋಡಿ: ನನ್ನ ಎದುರೇ ಮಾಧ್ಯಮ ಪ್ರತಿನಿಧಿಗಳಿಗೆ ಧಮ್ಕಿ ಹಾಕಿದವನು ಮಾನಸಿಕ ಅಸ್ವಸ್ಥ ಎಂದು ಶಾಸಕ ರಾಜು ಕಾಗೆ (Raju Kage) ತಿಳಿಸಿದರು. ಅಲ್ಲದೇ ವ್ಯಕ್ತಿಯ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದರು.

ಶಾಸಕ ರಾಜು ಕಾಗೆ ಎದುರೇ ಕಾಂಗ್ರೆಸ್ ಕಾರ್ಯಕರ್ತನಿಂದ ಪತ್ರಕರ್ತರಿಗೆ ವ್ಯಕ್ತಿಯೊಬ್ಬ ಧಮ್ಕಿ ಹಾಕಿದ್ದ. ಈ ವಿಚಾರವಾಗಿ ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಕೈ ಶಾಸಕ ರಾಜು ಕಾಗೆ ಎದುರಿನಲ್ಲೇ ಆಪ್ತನಿಂದ ಮಾಧ್ಯಮ ಪ್ರತಿನಿಧಿಗಳಿಗೆ ಧಮ್ಕಿ

ಬೇವನೂರು ಗ್ರಾಮದ ಜಾತ್ರೆಗೆ ಆಹ್ವಾನಿಸಿದಾಗ ನಾನು ಹೋಗಿದ್ದೆ. ಜಾತ್ರೆಯಲ್ಲಿ ಮೋಳೆ ಗ್ರಾಮದ ಒಬ್ಬ ಯುವಕ ಸೆಲ್ಫಿ ತೆಗೆದುಕೊಳ್ಳುತ್ತಿದ್ದ. ಅವನ ಹೆಸರು ನನಗೆ ಗೊತ್ತಿಲ್ಲ. ಅವನು ಸೈಕಿಕ್ ಇದ್ದಾನೆ. ಅಲ್ಲಿಗೆ ವಾದ್ಯಗಳ ಸೌಂಡ್ ಜೋರಾಗಿದ್ದ ಕಾರಣ ಅವನು ಮಾತನಾಡಿದ್ದು ನನಗೆ ಕೇಳಿಸಿಲ್ಲ. ನನಗೆ ಕೇಳಿಸಿದ್ದರೆ ಅಲ್ಲೇ ಅವನಿಗೆ ನಾನು ತಿಳಿ ಹೇಳುತ್ತಿದ್ದೆ ಎಂದು ಸ್ಪಷ್ಟಪಡಿಸಿದರು.

ಬೆಳಗ್ಗೆ ಕೆಲವು ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಈ ವೀಡಿಯೋ ನೋಡಿ ನನಗೂ ಆಶ್ಚರ್ಯವಾಯಿತು. ನನ್ನ 40 ವರ್ಷದ ರಾಜಕಾರಣದಲ್ಲಿ ಮಾಧ್ಯಮಗಳ ಜೊತೆ ಉತ್ತಮ ಸಂಬಂಧ ಹೊಂದಿದ್ದೇನೆ. ಆ ಹೇಳಿಕೆಗೂ ನನಗೆ ಯಾವುದೇ ಸಂಬಂಧವಿಲ್ಲ. ನನ್ನ ಮೇಲಿನ‌ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು. ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘನೆ – ಮೈಸೂರಿನಲ್ಲಿ ಒಂದೇ ದಿನ ಬರೋಬ್ಬರಿ 7,336 ಕೇಸ್ ದಾಖಲು!

ಶಾಸಕ ರಾಜು ಕಾಗೆ ಎದುರೇ ಸೆಲ್ಫಿ ವೀಡಿಯೋ‌ ಮಾಡಿ ಮಾಧ್ಯಮದವರಿಗೆ ಸಂತೋಷ ಎಂಬಾತ ಧಮ್ಕಿ ಹಾಕಿದ್ದ. ಶಾಸಕ ರಾಜು ಕಾಗೆ ವಿರುದ್ಧ ಸುದ್ದಿ ಹಾಕಿದರೆ ಮನೆಗೆ ನುಗ್ಗಿ ಕೈ-ಕಾಲು ಮುರಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದ. ಈ ದೃಶ್ಯದ ವೀಡಿಯೋ ವೈರಲ್‌ ಆಗಿತ್ತು.