ನಿಮ್ಮ ಭಾಗ್ಯ ಕೊಡದಿದ್ರೂ ಪರವಾಗಿಲ್ಲ, ಬೆಲೆ ಏರಿಕೆ ದೌರ್ಭಾಗ್ಯ ಮಾತ್ರ ಬೇಡ: ವಿಜಯೇಂದ್ರ

ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ಯಾವ ಭಾಗ್ಯವನ್ನು ಕೊಡದಿದ್ದರೂ ಪರವಾಗಿಲ್ಲ, ಬೆಲೆ ಏರಿಕೆಯ ದೌರ್ಭಾಗ್ಯವನ್ನು ಮಾತ್ರ ನಮ್ಮ ಮೇಲೆ ಹೇರಬೇಡಿ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ  (B.Y Vijayendra) ರಾಜ್ಯ ಸರ್ಕಾರಕ್ಕೆ ಕುಟುಕಿದ್ದಾರೆ.

ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ (Petrol Price Hike) ಏರಿಕೆ ಮಾಡಿರುವ ವಿಚಾರವಾಗಿ ಅವರು ಖಂಡಿಸಿ ಎಕ್ಸ್‍ನಲ್ಲಿ ಸರಣಿ ಪೋಸ್ಟ್ ಹಾಕಿದ್ದಾರೆ. ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ಅಧಿಕಾರಕ್ಕೇರುವ ಒಂದೇ ಕಾರಣಕ್ಕಾಗಿ ಪಂಚ ಭಾಗ್ಯದ ಮೋಡಿ ಮಾಡಿದ್ದೀರಿ. ಈ ಮೂಲಕ ನೀವು ರಾಜ್ಯದ ಮತದಾರರನ್ನು ದಿಕ್ಕು ತಪ್ಪಿಸಿದ್ದು ನಾಡಿನ ದೌರ್ಭಾಗ್ಯವಲ್ಲದೇ ಬೇರೇನೂ ಅಲ್ಲ. ರಾಜ್ಯದ ಜನತೆ ನಿಮ್ಮ ಬಳಿ ಯಾವ ಭಾಗ್ಯವನ್ನು ಬೇಡಿರಲಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ದಿನ ಬಳಕೆ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಸರಣಿ ರೂಪದಲ್ಲಿ ಏರಿಸುತ್ತಲೇ ಇದ್ದೀರಿ. ಇದೀಗ ಪೆಟ್ರೋಲ್ 3ರೂ. ಹಾಗೂ ಡೀಸೆಲ್ ಮೇಲೆ 3.50 ರೂ. ದರ ಏರಿಸಿ ಜನಸಾಮಾನ್ಯರ ಕೈ ಸುಟ್ಟಿದ್ದೀರಿ. ಈ ಬೆಲೆ ಏರಿಕೆಯ ಪ್ರತಿಕೂಲ ಪರಿಣಾಮ ಸಹಜವಾಗಿಯೇ ಸರಕು ಸಾಗಾಣಿಕೆ, ಹಾಗೂ ಸಾರಿಗೆ ದರಗಳೂ ವಿಪರೀತ ಹೆಚ್ಚಳವಾಗಲಿದೆ. ಇದರಿಂದ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಯೂ ಏರಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಬರಿದಾಗಿರುವ ನಿಮ್ಮ ಖಜಾನೆ ತುಂಬಿಸಲು ಜನಸಾಮಾನ್ಯರು ಹಾಗೂ ಕಡು ಬಡವರ ಜೇಬು ಖಾಲಿ ಮಾಡಲು ಹೊರಟಿದ್ದೀರಿ. ನಿಮ್ಮ ಜನ ವಿರೋಧಿ ನೀತಿ ನಿರ್ಧಾರಗಳನ್ನು ಬಿಜೆಪಿ ಪ್ರಬಲವಾಗಿ ಖಂಡಿಸಿ ಪ್ರತಿಭಟಿಸುತ್ತದೆ. ಈ ಕೂಡಲೇ ಪೆಟ್ರೋಲ್ ಡೀಸೆಲ್ ದರ ಏರಿಕೆ ನಿರ್ಧಾರವನ್ನು ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ ಜನಾಕ್ರೋಶವನ್ನು ಪ್ರತಿನಿಧಿಸಿ ಬಿಜೆಪಿ ಬೀದಿಗಿಳಿದು ಹೋರಾಡಲಿದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಬಿಜೆಪಿಗೆ ಮತ ಹಾಕಿದ್ದಕ್ಕೆ‌ ಕಾಂಗ್ರೆಸ್‌ ಸರ್ಕಾರ ಸೇಡು ತೀರಿಸಿಕೊಳ್ತಿದೆ – ಅಶೋಕ್‌

ತುಘಲಕ್ ಸರ್ಕಾರದ ನಿರ್ಧಾರ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಇದು ತುಘಲಕ್ ಸರ್ಕಾರದ ನಿರ್ಧಾರ ಎಂದು ಕಿಡಿಕಾರಿದ್ದಾರೆ.

ಸಾರ್ವತ್ರಿಕ ಚುನಾವಣೆ ಮುಗಿದು 10 ದಿನ ಕಳೆದಿಲ್ಲ. ಚುನಾವಣೆಗೂ ಮುನ್ನ ಎಲ್ಲಾ ಯೋಜನೆಗಳನ್ನು ರದ್ದು ಮಾಡಿ, ಗ್ಯಾರಂಟಿ ಯೋಜನೆ ಜಪ ಮಾಡುತ್ತಿತ್ತು. ಫಲಿತಾಂಶ ಬಂದ ಬಳಿಕ ಏಕಾಏಕಿ ತೆರಿಗೆ ಹೆಚ್ಚಳ ಮಾಡಿದ್ದಾರೆ. ರಾಜ್ಯ ಸರ್ಕಾರದ ಆಡಳಿತ ವೈಖರಿಗೆ ಇದು ಸಾಕ್ಷಿಯಾಗಿದೆ. ಸರ್ಕಾರದ ಈ ನಡೆಯ ವಿರುದ್ಧ ಬಿಜೆಪಿಯಿಂದ ಭಾನುವಾರದಿಂದಲೇ ಹೋರಾಟ ಆರಂಭ ಮಾಡುತ್ತೇವೆ. ತಕ್ಷಣ ಸರ್ಕಾರ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೂ ಹಾಲಿಗೆ ಸಬ್ಸಿಡಿ ಇಲ್ಲ, ಕಂದಾಯ ಇಲಾಖೆ ಕಾಗದ ಪತ್ರಗಳ ದರ ಹೆಚ್ಚಳವಾಗಿದೆ. ಎಂಜಿನಿಯರಿಂಗ್, ಮೆಡಿಕಲ್ ಕಾಲೇಜಿನ ಶುಲ್ಕ ಹೆಚ್ಚಳವಾಗಿದೆ. ಈಗ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಮಾಡಿ ಖಜಾನೆ ತುಂಬಿಸುವ ಕಾರ್ಯ ಆರಂಭ ಮಾಡಿದ್ದಾರೆ. ರಾಜ್ಯದಲ್ಲಿ 13,000 ಕೋಟಿ ರೂ. ತೆರಿಗೆ ಸಂಗ್ರಹದಲ್ಲಿ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ದುರ್ಗಾದೇವಿಗೆ ಭಂಡಾರದ ನೈವೇದ್ಯ – ಮುಧೋಳ ಲೋಕಾಪುರದಲ್ಲಿ 7 ವರ್ಷಕ್ಕೊಮ್ಮೆ ನಡೆಯುತ್ತದೆ ವಿಶಿಷ್ಟ ಜಾತ್ರೆ