ಒಂದೇ ವಾರ್ಡ್ ನಲ್ಲಿ ಮೂರು ಇಂದಿರಾ ಕ್ಯಾಂಟೀನ್- ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

ಬೆಂಗಳೂರು: ನಗರದ ಪ್ರತಿ ವಾರ್ಡ್ ನಲ್ಲೊಂದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡೋದು ಸರ್ಕಾರದ ಯೋಜನೆ. ಆದರೆ ಇಲ್ಲೊಂದು ವಾರ್ಡ್ ನಲ್ಲಿ ಮೂರು ಇಂದಿರಾ ಕ್ಯಾಂಟೀನ್ ಗಳನ್ನು ನಿರ್ಮಿಸಲಾಗಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.

ಹೌದು. ಕಾಮಾಕ್ಷಿ ಪಾಳ್ಯ ವಾರ್ಡ್ ಸ್ಥಳೀಯ ಬಿಬಿಎಂಪಿ ಸದಸ್ಯೆಯ ವಿರೋಧದ ನಡುವೆಯೂ ಕಸ ವಿಂಗಡನೆ ಘಟಕದ ಪಕ್ಕದಲ್ಲೇ ಈ ಕ್ಯಾಂಟೀನ್ ನಿರ್ಮಾಣ ಮಾಡಲಾಗಿದೆ ಅನ್ನೋದು ಕಾರ್ಪೋರೇಟರ್ ಪ್ರತಿಮಾ ಆರೋಪ. ಅದು ಹೋಗ್ಲಿ ಅಂದ್ರೆ ಈ ಇಂದಿರಾ ಕ್ಯಾಂಟೀನ್ ಇರುವ ರಸ್ತೆಯಲ್ಲೇ ಕೇವಲ 500 ಮೀಟರ್ ದೂರದಲ್ಲಿ ಮತ್ತೊಂದು ಕ್ಯಾಂಟೀನ್ ನಿರ್ಮಿಸಲಾಗಿದೆ. ಅದು ಪಕ್ಕದ ಗೋವಿಂದ್ ರಾಜ್ ನಗರ ವಾರ್ಡ್ ಗೆ ಸೇರಬೇಕಿದ್ದ ಕ್ಯಾಂಟೀನ್ ಅಗಿದ್ದು, ಕಾಮಾಕ್ಷಿ ಪಾಳ್ಯ ವಾರ್ಡ್ ನಲ್ಲಿ ನಿರ್ಮಿಸಿರೋದಕ್ಕೆ ಪ್ರತಿಮಾ ಆಕ್ರೋಶ ವ್ಯಕ್ತಪಡಿಸಿದ್ರು.

ಒಂದಲ್ಲ, ಎರಡಲ್ಲ ಅಷ್ಟು ಸಾಲ್ದು ಅಂತಾ ಇದೀಗಾ ಇದೇ ವಾರ್ಡ್ ನ ಶಾರದ ಕಾಲೋನಿ ಬಸ್ ನಿಲ್ದಾಣದಲ್ಲಿ ಮತ್ತೊಂದು ಅಂದ್ರೆ ಮೂರನೇ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಪಾಯ ತೋಡಲಾಗಿದೆ. ಎಲ್ಲ ವಾರ್ಡ್ ನ ಸಾರ್ವಜನಿಕರಿಗೆ ಸಲ್ಲ ಬೇಕಿದ್ದ ಜನ ಪರ ಯೋಜನೆಯನ್ನು ಎಲ್ಲೆಂದರಲ್ಲಿ ನಿರ್ಮಾಣ ಮಾಡುತ್ತಿರೋದರ ಬೆನ್ನಲ್ಲೇ ಸಾರ್ವಜನಿಕರ ಹಿತಾಸಕ್ತಿಗಿಂತ ಕೇವಲ ಪಬ್ಲಿಸಿಟಿ ಗಿಮಿಕ್ ಮಾತ್ರ ಇದೆ ಅನ್ನೋದಾಗಿ ಆರೋಪಿಸಿದ್ರು.

ವಾರ್ಡ್ ನಲ್ಲಿ ಮೂರು ಇಂದಿರಾ ಕ್ಯಾಂಟೀನ್ ನಿರ್ಮಾಣದ ಬಗ್ಗೆ ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದು, ಜನರ ಹಿತಾಸಕ್ತಿಗಿಂತ ಸರ್ಕಾರಕ್ಕೆ ಲೆಕ್ಕ ತೋರಿಸೋ ಉದ್ದೇಶದಿಂದ ಈ ರೀತಿ ಹಠಕ್ಕೆ ಬಿದ್ದು ಅಕ್ಕ ಪಕ್ಕದ ವಾರ್ಡ್ ಗಳ ಇಂದಿರಾ ಕ್ಯಾಂಟೀನ್ ಗಳನ್ನು ಅನಗತ್ಯವಾಗಿ ನಿರ್ಮಿಸಿದ್ದಾರೆ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Comments

Leave a Reply

Your email address will not be published. Required fields are marked *