3 ಲಕ್ಷ ಬಿಲ್ ಪಾವತಿಸಲು ಕೇಳಿದ್ದಕ್ಕೆ ಲಾಡ್ಜ್ ಸಿಬ್ಬಂದಿ ಮೇಲೆ ಪೊಲೀಸರ ಹಲ್ಲೆ

ಬೆಳಗಾವಿ: ಪೊಲೀಸರು ಎಂದರೆ ನಮಗೆ ನೆನಪಾಗೋದು ಶಾಂತಿಯನ್ನು ಕಾಪಾಡಲು ಇರುವವರು, ನಮ್ಮ ರಕ್ಷಣೆಗೆ ಇರುವ ಆರಕ್ಷಕರು. ಆದರೆ ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸರು ಮಾತ್ರ ಡಿಫ್ರೆಂಟ್. ಇವರು ಮಾಡಿರುವ ಕೆಲಸ ನೋಡಿದರೆ ಇಡೀ ಪೊಲೀಸ್ ಇಲಾಖೆಗೆ ಶಾಕ್ ಆಗುತ್ತೆ.

ಖಾನಾಪುರದಲ್ಲಿ ಶಾಂತಿಸಾಗರ ಹೋಟೆಲ್ ಅಂಡ್ ಲಾಡ್ಜ್ ಗೆ ನುಗ್ಗಿದ ನಾಲ್ಕೈದು ಪೊಲೀಸರು ಮಲಗಿದ್ದವರನ್ನು ಎಬ್ಬಿಸಿ ರಾದ್ದಾಂತ ಮಾಡಿದ್ದಾರೆ. ಏಕಾಏಕಿ ಹಲ್ಲೆ ಮಾಡುವ ಪೊಲೀಸರ ಗೂಂಡಾವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅಸಲಿಗೆ ಶಾಂತಿಸಾಗರ ಹೋಟೆಲ್ ಅಂಡ್ ಲಾಡ್ಜ್ ಗೆ ಆಗಾಗ ಭೇಟಿ ನೀಡುತ್ತಿದ್ದ ಪೊಲೀಸರು ಕಂಠಪೂರ್ತಿ ಕುಡಿದು, ಚೆನ್ನಾಗಿ ತಿಂದು ಹೋಗುತ್ತಿದ್ದರು. ಅಷ್ಟೇ ಅಲ್ಲದೆ ಇಲಾಖೆ ಕೆಲಸದ ಮೇಲೆ ಬರುವ ಇಲಾಖೆಯ ಸಿಬ್ಬಂದಿಗಳಿಗೆ ಲಾಡ್ಜ್ ನಲ್ಲಿ ವಸತಿ ಸೌಕರ್ಯ ಮಾಡಿಕೊಡುತ್ತಿದ್ದರು. ಅದರ ಬಿಲ್ ಬರೋಬ್ಬರಿ 3 ಲಕ್ಷ ರೂಪಾಯಿ ಮೀರಿದ್ರಿಂದ ಮಾಲೀಕ ಚಂದ್ರಶೇಖರ ಶೆಟ್ಟಿ ಬಿಲ್ ಪಾವತಿಸಲು ಕೇಳಿದರು. ಇದರಿಂದ ಕೋಪಗೊಂಡ ಪೊಲೀಸರು ಮಧ್ಯರಾತ್ರಿ ಲಾಡ್ಜ್ ಗೆ ನುಗ್ಗಿ ದೌರ್ಜನ್ಯ ಮೆರೆದಿದ್ದಾರೆ.

ಬಿಲ್ ಪಾವತಿ ಮಾಡಿ ಎಂದಿದ್ದಕ್ಕೆ ಹಲ್ಲೆ ಮಾಡಿರುವ ಪೊಲೀಸರು ಇದೀಗ ಮಾಲೀಕ ಚಂದ್ರಶೇಖರ ಶೆಟ್ಟಿ ಹಿರಿಯ ಪುತ್ರ ಶರದ್ ಶೆಟ್ಟಿಯನ್ನು ಬಂಧಿಸಿದ್ದು, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪ ಹೊರಿಸಲಾಗಿದೆ.

ಲಾಡ್ಜ್ ಮಾಲೀಕ ಚಂದ್ರಶೇಖರ ಶೆಟ್ಟಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರ ದೌರ್ಜನ್ಯದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ಕೇಳಿಬಂದಿವೆ.

 

Comments

Leave a Reply

Your email address will not be published. Required fields are marked *