ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಫ್ರೀ ಲಿಂಕ್ ಬಗ್ಗೆ ಇರಲಿ ಎಚ್ಚರ – ಮಂಗಳೂರಿನಲ್ಲೂ ಸೈಬರ್ ವಂಚನೆ ಬೆಳಕಿಗೆ

ಮಂಗಳೂರು: ದೇಶಾದ್ಯಂತ ಕಾಶ್ಮೀರ್ ಫೈಲ್ಸ್ ಚಿತ್ರ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ ಇದನ್ನೇ ಬಂಡವಾಳವನ್ನಾಗಿಸಿದ ಸೈಬರ್ ವಂಚಕರು ಜನರನ್ನು ಲೂಟಿ ಮಾಡಲು ಹೊರಟಿರುವುದು ಬೆಳಕಿಗೆ ಬಂದಿದೆ. ಚಿತ್ರವನ್ನು ಉಚಿತವಾಗಿ ತೋರಿಸುವ ನೆಪದಲ್ಲಿ ಮೊಬೈಲ್‌ಗೆ ಲಿಂಕ್ ಕಳುಹಿಸಿ ವಂಚನೆ ಮಾಡುತ್ತಿರುವ ಬಗ್ಗೆ ಸೈಬರ್ ತಜ್ಞರು ಎಚ್ಚರಿಸಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದೆಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಲಿಂಕ್ ಹರಿದಾಡುತ್ತಿದೆ. ಒಂದು ವೇಳೆ ಸುಲಭ, ಉಚಿತವಾಗಿ ಸಿನಿಮಾ ನೋಡುವ ಆಸೆಯಿಂದ ಅದನ್ನು ಕ್ಲಿಕ್ ಮಾಡಿದರೆ ಮೊಬೈಲ್, ಕಂಪ್ಯೂಟರ್ ವೈರಸ್ ದಾಳಿಗೆ ತುತ್ತಾಗುವುದು ಖಚಿತ. ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್ ಡೌನ್ಲೋಡಿಂಗ್ ಲಿಂಕ್ ಕ್ಲಿಕ್ ಮಾಡಿದ್ರೆ ಬ್ಯಾಂಕ್ ಖಾತೆಗೆ ಕನ್ನ

ಗೂಗಲ್ ಸರ್ಚ್‌ನಲ್ಲಿ ಪ್ರಸ್ತುತ ಕಾಶ್ಮೀರ್ ಫೈಲ್ಸ್ ಕೀವರ್ಡ್ ಟಾಪ್ ಲೀಸ್ಟ್‌ನಲ್ಲಿದೆ. ಈ ಅವಕಾಶವನ್ನು ಬಳಸಿಕೊಳ್ಳುವ ಸೈಬರ್ ಖದೀಮರು, ಬಳಕೆದಾರರನ್ನು ಸುಲಭವಾಗಿ ವಂಚನಾ ಜಾಲಕ್ಕೆ ಬೀಳಿಸುತ್ತಿದ್ದಾರೆ. ಈ ಬಗ್ಗೆ ಬಳಕೆದಾರರು ಎಚ್ಚರಿಕೆಯಿಂದ ಇರುವಂತೆ ಮಂಗಳೂರಿನ ಸೈಬರ್ ತಜ್ಞ ಡಾ. ಅನಂತ ಪ್ರಭು.ಜಿ ಎಚ್ಚರಿಸಿದ್ದಾರೆ.

ವಂಚಕರು ಕಳುಹಿಸುವ ಲಿಂಕ್ ಕ್ಲಿಕ್ ಮಾಡಿದ ಬಳಿಕ ನಮ್ಮ ಅರಿವಿಗೆ ಬಾರದಂತೆ ಕೀ ಲಾಗರ್ ಎಂಬ ಆಪ್ ಡ್ರೈ ಬೈ ಡೌನ್‌ಲೋಡ್ ಟೆಕ್ನಿಕ್ ಮೂಲಕ ಡೌನ್‌ಲೋಡ್ ಆಗಿ ಇನ್‌ಸ್ಟಾಲ್ ಆಗುತ್ತದೆ. ಆ ಬಳಿಕ ನಾವು ಮೊಬೈಲ್, ಕಂಪ್ಯೂಟರ್‌ನಲ್ಲಿ ಏನೇ ಮಾಡಿದರೂ ಅದರ ಒಂದು ಕಾಪಿ, ಹ್ಯಾಕರ್ಸ್ ಕೈ ಸೇರುತ್ತದೆ. ಇದರ ಜೊತೆ ಹ್ಯಾಕರ್‌ಗಳು ಮೊಬೈಲ್, ಕಂಪ್ಯೂಟರ್‌ನಲ್ಲಿರುವ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿ, ಪಾನ್ ಕಾರ್ಡ್ ಸೇರಿದಂತೆ ಇತರ ಖಾಸಗಿ ಮಾಹಿತಿಗಳನ್ನು ಗೌಪ್ಯವಾಗಿ ಪಡೆಯುತ್ತಾರೆ.

ಒಂದು ವೇಳೆ ಈ ಲಿಂಕ್ ಮೂಲಕ ಶಾರ್ಕ್ ಬೋಟ್ ಎಂಬ ಆಪ್ ಡೌನ್‌ಲೋಡ್ ಆದರೆ ಖಾತೆದಾರರಿಗೆ ಗೊತ್ತಾಗದಂತೆ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ವರ್ಗಾವಣೆ ಮಾಡುತ್ತದೆ. ಈ ಆಪ್ ಯಾಂತ್ರಿಕವಾಗಿ ಬ್ಯಾಂಕ್ ಸರ್ವರ್‌ನೊಂದಿಗೆ ನೆಟ್‌ವರ್ಕ್, ಒಟಿಪಿ ನಮೂದಿಸುವ ಕಾರ್ಯ, ವರ್ಗಾವಣೆ ಸೇರಿದಂತೆ ಎಲ್ಲಾ ಕೆಲಸವನ್ನು ಈ ಸಿಸ್ಟಂ ಮಾಡುತ್ತದೆ. ಇದನ್ನೂ ಓದಿ: ಉಚಿತ ಪ್ರದರ್ಶನ ನಿಲ್ಲಿಸಿ: ಬಿಜೆಪಿಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಮನವಿ

ಉತ್ತರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ರೀತಿಯ ಘಟನೆಗಳು ವರದಿಯಾಗಿದೆ. ಮಂಗಳೂರಿನಲ್ಲಿಯೂ ಕೆಲವರು ಈಗಾಗಲೇ ಇಂತಹ ಲಿಂಕ್‌ಗಳನ್ನು ಒತ್ತಿರುವ ಬಗ್ಗೆಯೂ ಮಾಹಿತಿಯಿದೆ. ಒಟ್ಟಿನಲ್ಲಿ ಉಚಿತವಾಗಿ ಸಿನಿಮಾ ನೋಡುವ ಆಸೆಯಲ್ಲಿ ಖಾತೆಯಲ್ಲಿ ಇದ್ದ ಹಣವನ್ನು ಪೂರ್ತಿಯಾಗಿ ಕಳೆದುಕೊಳ್ಳುವ ಬದಲು ಒಟಿಟಿ ಪ್ಲಾಟ್‌ಫಾರ್ಮ್ ಅಥವಾ ಚಿತ್ರಮಂದಿರದಲ್ಲಿ ಸಿನಿಮಾ ನೋಡುವುದು ಒಳಿತು.

Comments

Leave a Reply

Your email address will not be published. Required fields are marked *