ಜಸ್ಟ್‌ ಮಿಸ್‌ – ಬಿಟ್ಟಾ ಕರಾಟೆಯಿಂದ ಪಾರಾಗಿ ಇಂದಿಗೂ ಜೀವಂತವಿದ್ದಾರೆ ವ್ಯಕ್ತಿ

– ಬಿಟ್ಟಾನ ಮತ್ತೊಂದು ಕರಾಳ ಮುಖ ಬಹಿರಂಗ
– ಮಾವ ಪಾರಾದ ರೋಚಕ ಕಥೆ ತಿಳಿಸಿದ ಎನ್‌ಆರ್‌ಐ ವೈದ್ಯ

ಬೆಂಗಳೂರು: ಕಾಶ್ಮೀರ ಪಂಡಿತರ ಮಾರಣಹೋಮವನ್ನು ಬಿಚ್ಚಿಡುವ ʼ ದಿ ಕಾಶ್ಮೀರ ಫೈಲ್ಸ್‌ʼ ಸಿನಿಮಾ ಬಿಡುಗಡೆಯಾದ ಬಳಿಕ ಬಹಳಷ್ಟು ಪಂಡಿತ ಕುಟುಂಬದ ಸದಸ್ಯರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈಗ ಅಮೆರಿಕದಲ್ಲಿರುವ ವೈದ್ಯರೊಬ್ಬರು ತಮ್ಮ ನೋವನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

ರಾಜೀವ್‌ ಪಂಡಿತ್‌ ತನ್ನ ಮಾವ ಫಾರೂಕ್ ಅಹ್ಮದ್ ದಾರ್ ಅಲಿಯಾಸ್‌ ಬಿಟ್ಟಾ ಕರಾಟೆ ಕೈಯಿಂದ ಪಾರಾದ ಕಥೆಯನ್ನು ಮೊದಲ ಬಾರಿಗೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್‌ ಗಳನ್ನು ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ರೀಟ್ವೀಟ್‌ ಮಾಡಿದ್ದಾರೆ.

ರಾಜೀವ್‌ ಪಂಡಿತ್‌ ಹೇಳಿದ್ದು ಏನು?
ನನ್ನ ಮಾವ ಬಿಟ್ಟಾ ಕರಾಟೆಯ ಗುಂಡೇಟಿನಿಂದ ಪಾರಾಗಿ ಇಂದಿಗೂ ಜೀವಂತವಾಗಿದ್ದಾರೆ. ಈ ಕಥೆಯನ್ನು ನಾನು ಇಲ್ಲಿಯವರೆಗೆ ಹೇಳಿರಲಿಲ್ಲ. ಈಗ ಮೊದಲ ಬಾರಿಗೆ ಬಹಿರಂಗ ಪಡಿಸುತ್ತಿದ್ದೇನೆ.

ಫಾರೂಕ್ ಅಹ್ಮದ್ ದಾರ್ ಸೈಕೋಪಾತ್ ಭಯೋತ್ಪಾದಕನಾಗುವ ಮೊದಲು ಅವನು ನಮ್ಮ ಕುಟುಂಬದ ಸದಸ್ಯರ ಜೊತೆ ಶ್ರೀನಗರದಲ್ಲಿ ಕ್ರಿಕೆಟ್ ಆಡುತ್ತಿದ್ದ. ಬಾಲ್ಯದಲ್ಲಿ ಆತನನ್ನು ಮುದ್ದಿನಿಂದ ಬಿಟ್ಟಾ ಎಂದು ಕರೆಯಲಾಗುತ್ತಿತ್ತು. ಶಾಲೆಗೆ ಹೋಗುವ ಸಮಯದಲ್ಲಿ ಬಿಟ್ಟಾನಿಗೆ ಮಾವ ಹಣವನ್ನು ಕೊಟ್ಟಿದ್ದರು.

ಬಿಟ್ಟಾ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ತರಬೇತಿ ಪಡೆದು ಮರಳಿದ ಬಳಿಕ ನನ್ನ ಮಾವನನ್ನು ಹತ್ಯೆ ಮಾಡಲು ಆದೇಶ ಸಿಕ್ಕಿತು. ಬಿಟ್ಟಾ ಮತ್ತು ಮತ್ತೊಬ್ಬ ಜೆಕೆಎಲ್‌ಎಫ್‌(ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌) ಉಗ್ರ ಮನೆಯಿಂದ ಮಾವ ಹೊರ ಹೋಗುವುದನ್ನೇ ಕಾಯುತ್ತಿದ್ದರು. ಶ್ರೀನಗರದ ಬಳಿಯ ಹಬ ಕಡಲ ಬಳಿ ಬಂದಾಗ ಹಿಂದಿನಿಂದ ಬಂದು ಮಾವನನ್ನು ಶೂಟ್‌ ಮಾಡಿ ಹತ್ಯೆ ಮಾಡಲು ಅವರು ಪ್ಲ್ಯಾನ್‌ ಮಾಡಿದ್ದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

1990ರ ಫೆ.16 ರಂದು ಬೆಳಿಗ್ಗೆ 9:30 ಕ್ಕೆ ನನ್ನ ಚಿಕ್ಕಪ್ಪ ಚರ್ಮದ ಜಾಕೆಟ್ ಧರಿಸಿ ಮನೆಯಿಂದ ಹೊರಹೋಗುವುದನ್ನು ಗಮನಿಸಿದ ಉಗ್ರ ಬಿಟ್ಟಾನಿಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಸಿಕ್ಕಿದ ಕೂಡಲೇ ಬಿಟ್ಟ ಪಿಸ್ತೂಲ್‌ ಸಿದ್ಧ ಪಡಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಮಾವನಿಗೆ ಇವತ್ತು ಅಣ್ಣ ಹುಟ್ಟಿದ ದಿನ ಎಂದು ಥಟ್ಟನೆ ನೆನಪಾಗಿ ಮತ್ತೆ ಪೂಜೆ ಮಾಡಲೆಂದು ಮನೆಗೆ ತೆರಳುತ್ತಾರೆ.

ಮಾವ ಮನೆಗೆ ಮರಳಿದ ವಿಚಾರವನ್ನು ಮತ್ತೊಬ್ಬ ಉಗ್ರ ಗಮನಿಸಿರಲಿಲ್ಲ. ಈ ಸಮಯದಲ್ಲೇ ಬೆಳಗ್ಗೆ 9:30 ಕ್ಕೆ ನನ್ನ ಮಾವನ ಮನೆಯಿಂದ ಕೆಲ ದೂರದಲ್ಲಿ ಶೀಘ್ರವೇ ಮದುವೆಯಾಗಲಿದ್ದ ಅನಿಲ್‌ ಭಾನ್‌(26) ಹಬಾ ಕಡಲ ಕಡೆಗೆ ನಡೆಯಲು ಆರಂಭಿಸಿದ್ದರು. ಅವರು ಚರ್ಮದ ಜಾಕೆಟ್‌ ಧರಿಸಿದ್ದರು.

ಈ ವಿಚಾರ ತಿಳಿಯದ ಬಿಟ್ಟಾ ಕರಾಟೆ ಅನಿಲ್‌ ಅವರನ್ನು ನಡೆಯುತ್ತಿರುವುದನ್ನು ನೋಡಿ ಪಿಸ್ತೂಲ್‌ನಿಂದ ಶೂಟ್‌ ಮಾಡಿ ಹತ್ಯೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಅನಿಲ್‌ ಮೃತ ದೇಹದ ಮುಂದೆ ತಾಯಿಯ ಕಣ್ಣೀರನ್ನು ಎಂದೂ ಮರೆಯಲು ಸಾಧ್ಯವಿಲ್ಲ.

ಬಿಟ್ಟಾ ಕರಾಟೆ ನಾನು ತಪ್ಪಾಗಿ ಗುರುತಿಸಿ ವ್ಯಕ್ತಿಯನ್ನು ಕೊಲೆ ಮಾಡಿದ್ದೇನೆ ಎಂದು ನಂತರ ಒಪ್ಪಿಕೊಂಡಿದ್ದ. ಅನಿಲ್ ಅವರ ತ್ಯಾಗದ ಕಾರಣದಿಂದ ನನ್ನ ಮಾವ ಇಂದಿಗೂ ಜೀವಂತವಾಗಿದ್ದಾರೆ. ಇದನ್ನೂ ಓದಿ: 20 ಪಂಡಿತರ ಹತ್ಯೆ, ಕೆಎಎಸ್ ಅಧಿಕಾರಿ ಜೊತೆ ಮದುವೆ – ಕಾಶ್ಮೀರದ ರಕ್ತಪಾತದ ವಿಲನ್ ಬಿಟ್ಟಾ ಕರಾಟೆಯ ಕಥೆಯಿದು

ನಾನು ಈ ಕಥೆಯನ್ನು ಮೊದಲು ಹೇಳಿಲ್ಲ ಯಾಕೆಂದರೆ ಕಾಶ್ಮೀರಿ ಹಿಂದೂಗಳ ಪರವಾಗಿ 30 ವರ್ಷಗಳ ಕಾಲ ಅಮೆರಿಕದಲ್ಲಿ ಕಾಂಗ್ರೆಸ್ ಮತ್ತು ಮಾಧ್ಯಮಗಳಲ್ಲಿ ಮಾತನಾಡುತ್ತಿದ್ದರೂ ಯಾರೂ ಕೇಳುತ್ತಿರಲಿಲ್ಲ. ಈಗ ನೊಂದ ಜನರಿಗೆ ನ್ಯಾಯ ಒದಗಿಸಿದ್ದಕ್ಕೆ ವಿವೇಕ್‌ ಅಗ್ನಿಹೋತ್ರಿ ಅವರಿಗೆ ಧನ್ಯವಾದ ಹೇಳುತ್ತೇನೆ.

Comments

Leave a Reply

Your email address will not be published. Required fields are marked *