ರಾಜ್ಯದಲ್ಲಿ 27,000 ಕೋಟಿ ಹೂಡಿಕೆಗೆ ಅಸ್ತು – 13 ಯೋಜನೆಗಳಿಂದ 8,000 ಉದ್ಯೋಗ ಸೃಷ್ಟಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ ರಾಜ್ಯದಲ್ಲಿ 13 ಕಂಪನಿಗಳಿಂದ 27,000 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಲಾಯಿತು.

ಸಿದ್ದರಾಮಯ್ಯ ವಿಧಾನಸೌಧದಲ್ಲಿಂದು ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಸಭೆಯಲ್ಲಿ ರಾಜ್ಯದಲ್ಲಿ 13 ಕಂಪನಿಗಳಿಂದ 27 ಸಾವಿರ ಕೋಟಿ ಹೂಡಿಕೆಗೆ (Investment Proposals) ಒಪ್ಪಿಗೆ ನೀಡಲಾಗಿದೆ. ಅದರ ಅನ್ವಯ 11 ಹೊಸ ಯೋಜನೆಗಳು, 8 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂದಾಜಿಸಲಾಗಿದೆ. 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು ಸೇರಿವೆ ಒಟ್ಟು 13 ಯೋಜನೆಗಳಿಂದ 8,704 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸಚಿವ ಎಂ.ಬಿ ಪಾಟೀಲ್‌ (MB Patil) ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

11 ಹೊಸ ಹೂಡಿಕೆ ಯೋಜನೆಗಳ ಪೈಕಿ ತೇಜಸ್ ನೆಟ್ವರ್ಕ್ಸ್ 542.19 ಕೋಟಿ ರೂ., ವಾಯು ಅಸೆಟ್ಸ್ 1,251 ಕೋಟಿ ರೂ., ಜಿಂದಾಲ್ ಸ್ಟೀಲ್ಸ್ 1,300.57 ಕೋಟಿ ರೂ., ಜಿಂದಾಲ್ ಎಲೆಕ್ಟ್ರಿಕಲ್ ಸ್ಟೀಲ್ 7,102 ಕೋಟಿ ರೂ., ಗ್ರಾಸಿಂ ಇಂಡಸ್ಟ್ರೀಸ್ 1,386 ಕೋಟಿ ರೂ., ಎಸ್ಎಫ್ಎಕ್ಸ್ ಇಂಡಿಯಾ 9,298 ಕೋಟಿ ರೂ., ಸ್ನೀಡರ್ ಎಲೆಕ್ಟ್ರಿಕ್ ಐಟಿ ಬಿಝಿನೆಸ್, ಎಚ್ಎಸ್ಎಸ್ ಟೆಕ್ಸ್ಟೈಲ್ಸ್ 740 ಕೋಟಿ ರೂ., ಸ್ನೈಡರ್ ಎಲೆಕ್ಟ್ರಿಕ್ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1,520.75 ಕೋಟಿ ರೂ., ಕ್ಯೂಪಿಐಎಐ ಇಂಡಿಯಾ 1,136 ಕೋಟಿ ರೂ., ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಲಿಮಿಟೆಡ್ 1,330 ಕೋಟಿ ರೂ. ಮತ್ತು ರಿಲಯನ್ಸ್ ಕನ್ಸೂಮರ್ ಪ್ರಾಡಕ್ಟ್ಸ್ 1,622 ಕೋಟಿ ರೂ., ಹೂಡಿಕೆ ಮಾಡಲಿವೆ. ಮಿಕ್ಕಂತೆ, ಎಂಬೆಸಿ ಇಂಡಸ್ಟ್ರಿಯಲ್ ಪಾರ್ಕ್ ಮತ್ತು ಬಾಲಾಜಿ ವೇಫರ್ಸ್ ಕಂಪನಿಗಳು ಕ್ರಮವಾಗಿ 80 ಮತ್ತು 298.75 ಕೋಟಿ ರೂ. ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲಿವೆ.