ಭಾರತಕ್ಕೆ ಮತ್ತಷ್ಟು ಬಲ – ವಾಯುಪಡೆಗೆ 3 ಅಪಾಚೆ ಹೆಲಿಕಾಪ್ಟರ್‌, ಪಾಕ್ ಗಡಿಯಲ್ಲಿ ನಿಯೋಜನೆಗೆ ನಿರ್ಧಾರ

ನವದೆಹಲಿ: ಭಾರತದ ವಾಯುಪಡೆಗೆ ಅಮೆರಿಕದ 3 ಅಪಾಚೆ ಹೆಲಿಕಾಪ್ಟರ್‌ಗಳು (Apache helicopters) ಸೇರ್ಪಡೆಗೊಂಡಿವೆ. ಜುಲೈ 21ರಂದು ಈ ಮೂರು ಹೆಲಿಕಾಪ್ಟರ್‌ಗಳು ಭಾರತ-ಪಾಕ್ ಗಡಿಯಲ್ಲಿ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ.

ರಕ್ಷಣಾ ಮತ್ತು ಭದ್ರತಾ ಸಂಸ್ಥೆಗಳಿಗೆ (Defence Sector) ಸಂಬಂಧಿಸಿದ ಮೂಲಗಳ ಪ್ರಕಾರ, ಭಾರತ ಸ್ವೀಕರಿಸಲಿರುವ ಮೂರು ಹೆಲಿಕಾಪ್ಟರ್‌ಗಳನ್ನು ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾಗುತ್ತದೆ. ‘ಗಾಳಿಯಲ್ಲಿರುವ ಯುದ್ಧ ಟ್ಯಾಂಕ್‌ಗಳು’ ಎಂದೂ ಕರೆಯಲ್ಪಡುವ ಸುಧಾರಿತ AH-64E ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಭಾರತೀಯ ವಾಯುಪಡೆಯ (IAF) ಹಿಂಡನ್ ವಾಯುಪಡೆ ನಿಲ್ದಾಣದಲ್ಲಿ ಇಳಿಯಲಿವೆ. ರಾಜಸ್ಥಾನದ ಜೋಧ್‌ಪುರದಲ್ಲಿ ವಾಯುಸೇನೆಯು ತನ್ನ ಮೊದಲ ಅಪಾಚೆ ಸ್ಕ್ವಾಡ್ರನ್ ರಚಿಸಿದ 15 ತಿಂಗಳ ನಂತರ, ಅಮರಿಕದಿಂದ ಮೊದಲ ಕಂತಿನ ಮೂರು ಅಪಾಚೆ ಹೆಲಿಕಾಪ್ಟರ್‌ಗಳು ಭಾರತಕ್ಕೆ ಬರುತ್ತಿವೆ.

ಈ ಹಿಂದೆ 2015ರಲ್ಲಿ 22 ಅಪಾಚೆ ಹೆಲಿಕಾಪ್ಟರ್ ಖರೀದಿಸಲಾಗಿತ್ತು. ಜುಲೈ 2020ರಲ್ಲಿ ಮತ್ತೆ 600 ಮಿಲಿಯನ್ ಡಾಲರ್ ವೆಚ್ಚದ 6 ಹೆಲಿಕಾಪ್ಟರ್‌ಗಳಿಗಾಗಿ ಸಹಿ ಆಗಿತ್ತು. ಇದಾಗಿ ಒಂದು ವರ್ಷದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದಾಗ, ಮತ್ತೆ ಆರು ಹೊಸ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು 600 ಮಿಲಿಯನ್ ಅಮೆರಿಕನ್‌ ಡಾಲರ್‌ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ಒಪ್ಪಂದದ ಕರಾರಿನಂತೆ ಮೊದಲ ಕಂತಿನ ಮೂರು ಅಪಾಚೆ ಹೆಲಿಕಾಪ್ಟರ್‌ನ್ನು 2024ರ ಮೇ ಮತ್ತು ಜೂನ್ ನಡುವೆ ಭಾರತಕ್ಕೆ ತಲುಪಿಸಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಇದನ್ನು ಮುಂದೂಡಲಾಯಿತು. 15 ತಿಂಗಳು ತಡವಾಗಿ 3 ಹೆಲಿಕಾಪ್ಟರ್‌ ಭಾರತಕ್ಕೆ ಬರ್ತಿವೆ. ಗಾಳಿಯಲ್ಲಿರುವ ಯುದ್ಧ ಟ್ಯಾಂಕರ್ ಎಂದು ಕರೆಯಲ್ಪಡುವ ಸುಧಾರಿತ ಎಎಚ್-64ಇ ಹೆಲಿಕಾಫ್ಟರ್‌ಗಳು ಸೇನೆಯ ಆಕ್ರಮಣಾಕಾರಿ ಹಾಗೂ ವಿಚಕ್ಷಣಾ ಕಾರ್ಯಾಚರಣೆಗೆ ನೆರವಾಗಲಿವೆ.