ಬಳ್ಳಾರಿ ರಾಜಕಾರಣದ ಬಿಗ್ ಬ್ರೇಕಿಂಗ್-ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ‘ಕೈ’ ಕೊಡಲು ರೆಡ್ಡಿ ಟೀಂ ರಣತಂತ್ರ

ಬಳ್ಳಾರಿ: ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ವಿರೋಧಿಗಳನ್ನು ಸೋಲಿಸಲು ನಾಯಕರು ರಾಜಕೀಯ ತಂತ್ರ-ರಣತಂತ್ರಗಳನ್ನು ರಚಿಸುತ್ತಿದ್ದಾರೆ. ಬಳ್ಳಾರಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನಾರ್ದನ ರೆಡ್ಡಿ, ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಗೂ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಅಂತ ಅಚ್ಚರಿಯ ಹೇಳಿಕೆ ನೀಡಿದ್ದರು. ಅಮಿತ್ ಶಾ ಹೇಳಿಕೆಯ ನಂತರ ಬಳ್ಳಾರಿ ರಾಜಕಾರಣದಲ್ಲಿ ಭಾರೀ ಸಂಚಲನವೇ ಸೃಷ್ಟಿಯಾಗಿತ್ತು. ಆದ್ರೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವಶ್ಯಕತೆ, ಅವರ ಶಕ್ತಿ, ತಂತ್ರ ಪ್ರತಿ-ತಂತ್ರಗಳ ಮಾಸ್ಟರ್ ಪ್ಲಾನ್ ಬಗ್ಗೆ ಚುನಾವಣಾ ಚಾಣಕ್ಯ ಅಮಿತ್ ಶಾಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ಶ್ರೀರಾಮುಲು ಮೂಲಕ ಮನವರಿಕೆ ಮಾಡಿಕೊಡುವಲ್ಲಿ ಯಶ್ವಸಿಯಾಗಿದ್ದಾರೆ ಅಂತ ತಿಳಿದು ಬಂದಿದೆ.

ಜನಾರ್ದನ ರೆಡ್ಡಿ ಅವರ ತಂತ್ರಗಾರಿಕೆ ಮೂಲಕವೇ ಚುನಾವಣೆಯನ್ನು ಎದುರಿಸುತ್ತೇವೆ. ಅಲ್ಲದೇ ಜನಾರ್ದನ ರೆಡ್ಡಿ ಬಿಜೆಪಿಯೊಂದಿಗೆ ಇರ್ತಾರೆ ಅಂತ ಶ್ರೀರಾಮುಲು ಹೇಳಿದ್ದಾರೆ. ಶ್ರೀರಾಮುಲು ಸಂಸದರಾಗಿದ್ದರು ಅವರನ್ನು ಕೂಡ್ಲಿಗಿ ಅಥವಾ ಸಂಡೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಕಣಕ್ಕೆ ಇಳಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ನಗರದಿಂದ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ, ಕಂಪ್ಲಿಯಿಂದ ಸುರೇಶಬಾಬು, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಶ್ರೀರಾಮುಲು ಸಹೋದರ ಸಣ್ಣ ಫಕ್ಕೀರಪ್ಪ ಇಲ್ಲವೇ ಸಹೋದರಿ ಜೆ ಶಾಂತಾರನ್ನು ಕಣಕ್ಕೆ ಇಳಿಸಲು ಯೋಚಿಸಿದ್ದಾರೆ. ಇತ್ತ ಹಡಗಲಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಸೂಚಿಸಿದವರನ್ನೇ ಕಣಕ್ಕೆ ಇಳಿಸಲು ಬಿಜೆಪಿ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಅಂತ ಹೇಳಲಾಗಿದೆ.

ಒಟ್ಟಿನಲ್ಲಿ ನೇರವಾಗಿ ರಾಜಕೀಯದಲ್ಲಿ ಕಾಣಿಸಿಕೊಳ್ಳದಿದ್ದರೂ ಜನಾರ್ದನ ರೆಡ್ಡಿ ಅವರ ಅನತಿಯಂತೆ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಳ್ಳಾರಿಯಲ್ಲಿ ಸೋಲಿಸಲು ಜರ್ನಾದನ ರೆಡ್ಡಿ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Comments

Leave a Reply

Your email address will not be published. Required fields are marked *