ಖರ್ಚಿಲ್ಲದೇ ಟ್ರೋಲ್ ಮಾಡಿದವರೆಲ್ಲರಿಗೂ ಧನ್ಯವಾದ: ಕಟೀಲ್

ಮಂಗಳೂರು: ಯಾವುದೇ ರೀತಿಯ ಖರ್ಚು ಮಾಡದೇ ಟ್ರೋಲ್ ಮೂಲಕ ನನ್ನನ್ನು ದೇಶ ವಿದೇಶದಾದ್ಯಂತ ಪ್ರಸಿದ್ಧಿಪಡಿಸಿದ ಎಲ್ಲಾ ಟ್ರೋಲ್ ಪೇಜ್ ಗಳಿಗೆ ಹಾಗೂ ಟ್ರೋಲ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಸಮರ್ಪಿಸುತ್ತೇನೆಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ತೆವಳುತ್ತಾ ಸಾಗಿದ್ದ ಮಂಗಳೂರಿನ ಪಂಪ್‍ವೆಲ್ ಫ್ಲೈಓವರ್ ಕೊನೆಗೂ ಪೂರ್ಣಗೊಂಡು ಇಂದು ಲೋಕಾರ್ಪಣೆಗೊಂಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಫ್ಲೈಓವರನ್ನು ಉದ್ಘಾಟನೆಗೊಳಿಸಿದ್ದು, ವಾಹನ ಸಂಚಾರಕ್ಕೆ ಇಂದಿನಿಂದ ಮುಕ್ತವಾಗಿದೆ.

ಉದ್ಘಾಟನೆ ಬಳಿಕ ಸುದೀರ್ಘ ಭಾಷಣ ಮಾಡಿದ ಸಂಸದರು, ಫ್ಲೈಓವರ್ ಕೆಲಸ ನಿಧಾನಗತಿಗೆ ಕಾರಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಾಂಗ್ರೆಸ್ ಮೇಲೆ ನೇರ ಆರೋಪಗಳನ್ನು ಮಾಡಿದ ಕಟೀಲ್, ಫ್ಲೈಓವರ್ ತಡವಾಗಲು ಈ ಹಿಂದಿನ ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತ ಮತ್ತು ಹಿಂದಿನ ಶಾಸಕ ಜೆ ಅರ್ ಲೋಬೋ ಮತ್ತು ಸಚಿವ ರಮಾನಾಥ್ ರೈ ಅಂತಾ ದೂರಿದರು.

ಫ್ಲೈಓವರ್ ಹತ್ತು ವರ್ಷಗಳ ಪ್ರಾಜೆಕ್ಟ್ ಅಲ್ಲ. 2016ರಲ್ಲಿ ಮಹಾವೀರ ವೃತ್ತದಲ್ಲಿ ಕಲಶ ತೆಗೆದು 2017ರಲ್ಲಿ ಕಾಮಗಾರಿ ಆರಂಭವಾಯಿತು. ಪಂಪ್ ವೆಲ್ ಫ್ಲೈಓವರ್ ಕೇವಲ 2 ವರ್ಷ 2 ತಿಂಗಳಿನಲ್ಲಿ ಪೂರ್ಣಗೊಂಡಿದೆ ಅಂತ ಕಟೀಲ್ ಹೇಳಿದ್ದಾರೆ. ಇದನ್ನೂ ಓದಿ: ಕೊನೆಗೂ ಉದ್ಘಾಟನೆಯಾಯ್ತು ಮಂಗ್ಳೂರು ಪಂಪ್‍ವೆಲ್ ಫ್ಲೈಓವರ್!

ಇದೇ ವೇಳೆ ಟ್ರೋಲ್ ಪೇಜ್‍ಗಳಿಗೆ ಅಭಿನಂದನೆ ಸಲ್ಲಿಸಿದ ಕಟೀಲ್, ಖರ್ಚಿಲ್ಲದೆ ಟ್ರೋಲ್ ಪೇಜ್‍ಗಳು ನನಗೆ ಪ್ರಚಾರ ನೀಡಿದೆ. ಇಡೀ ದೇಶಕ್ಕೆ ನನ್ನ ಬಗ್ಗೆ ಮತ್ತು ಪಂಪ್‍ವೆಲ್ ಫ್ಲೈಓವರ್ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ ಅಂತ ಕಟೀಲ್ ವ್ಯಂಗ್ಯವಾಡಿದರು.

Comments

Leave a Reply

Your email address will not be published. Required fields are marked *