ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದಕ್ಕೆ ಧನ್ಯವಾದ: ವಿಶ್ವಕಪ್‌ ಗೆದ್ದ ಭಾರತಕ್ಕೆ ಧೋನಿ ವಿಶ್‌

– ಸಚಿನ್‌ ತೆಂಡೂಲ್ಕರ್‌, ಯುವರಾಜ್‌ ಸಿಂಗ್‌ ಅಭಿನಂದನೆ

ನವದೆಹಲಿ: ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಟೀಂ ಇಂಡಿಯಾಕ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಶುಭಕೋರಿದ್ದಾರೆ. ‘ಹುಟ್ಟುಹಬ್ಬಕ್ಕೆ ಅಮೂಲ್ಯವಾದ ಉಡುಗೊರೆ ನೀಡಿದ್ದಕ್ಕೆ’ ಧನ್ಯವಾದಗಳು ಎಂದು ಧೋನಿ ತಂಡದ ಆಟಗಾರರನ್ನು ಅಭಿನಂದಿಸಿದ್ದಾರೆ.

ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸಿ ಇನ್‌ಸ್ಟ್ರಾದಲ್ಲಿ ಪೋಸ್ಟ್‌ ಹಾಕಿರುವ ಧೋನಿ, ವರ್ಲ್ಡ್ ಕಪ್ ಚಾಂಪಿಯನ್ಸ್ 2024. ನನ್ನ ಹೃದಯ ಬಡಿತ ಹೆಚ್ಚಾಗಿತ್ತು. ಎಂದಿನಂತೆ ತಾಳ್ಮೆ ಹಾಗೂ ಆತ್ಮವಿಶ್ವಾಸದಿಂದ ಈ ಸಾಧನೆ ಮಾಡಿ ವಿಶ್ವಕಪ್‌ ಅನ್ನು ತವರಿಗೆ ತಂದಿದ್ದಕ್ಕಾಗಿ ಧನ್ಯವಾದಗಳು. ಹುಟ್ಟುಹಬ್ಬದ ಉಡುಗೊರೆ ನೀಡಿದ್ದಕ್ಕಾಗಿ ಧನ್ಯವಾದಗಳು ಎಂದು ಧೋನಿ ಬರೆದುಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಟೀಂ ಇಂಡಿಯಾ ಸಮವಸ್ತ್ರದಲ್ಲಿ ಲಗತ್ತಿಸಲಾಗದ ಪ್ರತಿಯೊಂದು ನಕ್ಷತ್ರವು, ನಮ್ಮ ದೇಶದ ಮಕ್ಕಳು ಅವರು ಕಂಡ ಕನಸು ಮುಟ್ಟಲು ಹುರಿದುಂಬಿಸಲಿದೆ. ಭಾರತಕ್ಕೆ ನಾಲ್ಕನೇ ನಕ್ಷತ್ರ (ವಿಶ್ವಕಪ್‌) ದೊರಕಿತು ಎಂದು ಪೋಸ್ಟ್‌ ಮಾಡಿ ಅಭಿನಂದಿಸಿದ್ದಾರೆ.

ನೀವು ಸಾಧಿಸಿದ್ದೀರಿ ಗೆಳೆಯರೇ.. ಹಾರ್ದಿಕ್‌ ಪಾಂಡ್ಯ ನೀನು ಹೀರೋ. ಜಸ್ಪ್ರಿತ್‌ ಬುಮ್ರಾ ಭಾರತವನ್ನು ಆಟಕ್ಕೆ ಮರಳಿ ತರಲು ಎಂತಹ ಬೌಲಿಂಗ್‌ ಮಾಡಿದರು. ತಂಡದಲ್ಲಿ ಪ್ರತಿಯೊಬ್ಬರು ಉತ್ತಮವಾಗಿ ಆಟವಾಡಿದಿರಿ ಎಂದು ಯುವರಾಜ್‌ ಸಿಂಗ್‌ ಅಭಿನಂದಿಸಿದ್ದಾರೆ.