ಇನ್ನ್ಮುಂದೆ ಹುಡ್ಗಿಯರಿಗೆ `ಚಮ್ಮಕ್ ಚಲ್ಲೋ’ ಅನ್ನುವಂತಿಲ್ಲ-ಮಹಿಳೆಯನ್ನು ರೇಗಿಸಿದ್ದವನಿಗೆ ಎಷ್ಟು ದಂಡ ಗೊತ್ತಾ?

ಮುಂಬೈ: ಇನ್ನು ಮುಂದೆ ಮಹಿಳೆಯರಿಗೆ ಅಥವಾ ಯುವತಿಯರಿಗೆ `ಚಮ್ಮಕ್ ಚಲ್ಲೋ’ ಎಂದು ಕರೆಯುವ ಹಾಗಿಲ್ಲ ಎಂದು ಮಹಾರಾಷ್ಟ್ರದ ಥಾಣೆ ಕೋರ್ಟ್ ಆದೇಶ ನೀಡಿದೆ. ಹೀಗೆ ಮಹಿಳೆಗೆ ಚಮಕ್ ಚಲ್ಲೋ ಎಂದು ಕರೆದಿದ್ದ ವ್ಯಕ್ತಿಗೆ 1 ರೂ. ದಂಡವನ್ನು ಸಹ ಕೋರ್ಟ್ ವಿಧಿಸಿದೆ.

ಏನಿದು ಪ್ರಕರಣ?:
ಜನೆವರಿ 9, 2009ರಂದು ಮಹಿಳೆಯೊಬ್ಬರು ಪತಿಯೊಂದಿಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಅಂಗಡಿ ಬದಿಯ ಡಸ್ಟ್‍ಬಿನ್ ಗೆ ಸ್ಕೂಟರ್ ಡಿಕ್ಕಿಯಾಗಿದೆ. ಹೀಗಾಗಿ ಬೈಕ್ ಸವಾರ ಮತ್ತು ಅಂಗಡಿ ಮಾಲೀಕನ ನಡುವೆ ಜಗಳ ನಡೆದಿದೆ. ಅಂಗಡಿಯವ ತನ್ನ ತಪ್ಪಿದ್ದರೂ ಮಹಿಳೆ ಮತ್ತು ಆಕೆಯ ಪತಿಯ ವಿರುದ್ಧ ಜಗಳಕ್ಕೆ ಇಳಿದಿದ್ದಾನೆ. ಜಗಳದಲ್ಲಿ ಅಂಗಡಿಯವ ಮಹಿಳೆಗೆ ಚಮ್ಮಕ್ ಚಲ್ಲೋ ಎಂದು ಹೇಳುವ ಮೂಲಕ ಅವಮಾನಿಸಿದ್ದನು.

ಈ ಸಂಬಂಧ ಮಹಿಳೆ ಅಂಗಡಿಯವನ ವಿರುದ್ಧ ತನ್ನನ್ನು ಅವಮಾನಿಸಿದ್ದರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದರು. ಆದರೆ ಪೊಲೀಸರು ಕೇಸ್ ಪಡೆಯಲು ಹಿಂಜರಿದ್ದರು. ಹೀಗಾಗಿ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು.

8 ವರ್ಷಗಳ ಬಳಿಕ ತೀರ್ಪು:
ಸುದೀರ್ಘ 8 ವರ್ಷಗಳ ವಿಚಾರಣೆಯ ಬಳಿಕ ನ್ಯಾಯಾಧೀಶರಾದ ಆರ್.ಟಿ.ಲಂಗಾಲೆ ಅವರು, ಐಪಿಸಿ ಸೆಕ್ಷನ್ 509 (ಶಬ್ದ, ಸನ್ನೆಯ ಮೂಲಕ ಮಹಿಳೆಯರಿಗೆ ಅವಮಾನ) ಅಡಿ ಅಂಗಡಿಯವನಿಗೆ ನ್ಯಾಯಾಲಯದ ಅವಧಿ ಮುಗಿಯವರೆಗೂ ಸಾಧಾರಣ ಕೈದಿಯ ಹಾಗೆ ಎದ್ದು ನಿಲ್ಲುವ ಶಿಕ್ಷೆ ಮತ್ತು 1 ರೂ. ದಂಡವನ್ನು ವಿಧಿಸುವ ಮೂಲಕ ತೀರ್ಪನ್ನು ನೀಡಲಾಗಿದೆ.

ಭಾರತೀಯ ಸಮಾಜದಲ್ಲಿ ಕೆಲವೊಂದು ಶಬ್ದ, ಪದಗಳನ್ನು ಬಳಸುವ ಮೂಲಕ ಮಹಿಳೆಯರಿಗೆ ಅವಮಾನಿಸುವುದು ಅಪರಾಧ ಆಗುತ್ತದೆ. ಈ ರೀತಿಯ ಪದಗಳನ್ನು ಬಳಸುವದರಿಂದ ಮಹಿಳೆಯರಿಗೆ ಕೋಪ ಬರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

ಬಾಲಿವುಡ್‍ನ ಶಾರೂಖ್ ಖಾನ್ ಅಭಿನಯದ ರಾ-ಒನ್ ಸಿನಿಮಾದಲ್ಲಿ ಹಾಡು ಚಮ್ಮಕ್ ಚಲ್ಲೋ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಹಾಗೆಯೇ ಅಕ್ಷಯ್ ಕುಮಾರ್ ನಟನೆಯ ರೌಡಿ ರಾಥೋರ್ ಸಿನಿಮಾದ `ಚಮ್ಮಕ್ ಚಲ್ಲೋ ಚೈನ್ ಚಮೇಲಿ’ ಹಾಡು ಸಹ ಹಿಟ್ ಆಗಿತ್ತು.

Comments

Leave a Reply

Your email address will not be published. Required fields are marked *