‘ಜ್ಯೂನಿಯರ್ಸ್’ ವಿರುದ್ಧ ತೊಡೆ ತಟ್ಟಿದ ತಲೈವಾ

ನ್ನಡ ಅಷ್ಟೇ ಅಲ್ಲ ಪರಭಾಷೆಯಲ್ಲೂ ಸ್ಟಾರ್‌ಗಳ ಚಿತ್ರ ಬರುವುದು ಅಪರೂಪ ಆಗಿದೆ. ಈ ನಡುವೆ ಓರ್ವ ಬಿಗ್‌ಸ್ಟಾರ್ ಇನ್ನೋರ್ವ ಬಿಗ್‌ಸ್ಟಾರ್ ಎದುರು ತೊಡೆ ತಟ್ಟಲು ಸಿದ್ಧವಾಗಿಬಿಟ್ಟರೆ ಅದಕ್ಕಿಂತ ಸ್ಟಾರ್‌ವಾರ್ ಇನ್ನೊಂದಿಲ್ಲ. ಇದೀಗ ಅಂಥದ್ದೇ ಸ್ಟಾರ್‌ವಾರ್‌ಗೆ ನಾಂದಿ ಹಾಡಿದ್ದಾರೆ ತಲೈವಾ. ಹೌದು ಜೂ.ಎನ್‌ಟಿಆರ್ (Jr. NTR) ಎದುರು ತೊಡೆ ತಟ್ಟಿ ಥಿಯೇಟರ್ ಯುದ್ಧಕ್ಕೆ ಇಳಿದಿದ್ದಾರೆ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth). ಹೀಗೆ ಸ್ಟಾರ್ ಸಿನಿಮಾಗಳು ಒಂದೇ ವಾರ ರಿಲೀಸ್ ಆದರೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು.

ಮುಂದಿರುವ ದೊಡ್ಡ ಹಬ್ಬವೆಂದರೆ ಅದು ದಸರಾ. ದಸರಾ ಅಂದ್ರೆ ರಜಾದಿನಗಳು ಹೆಚ್ಚಿರುತ್ತೆ. ಹೀಗಾಗಿ ಇದೇ ತಿಂಗಳನ್ನ ಜೂ.ಎನ್‌ಟಿಆರ್ ಬಹುನಿರೀಕ್ಷಿತ ಚಿತ್ರ `ದೇವರ ಪಾರ್ಟ್-1′ (Devara) ರಿಸರ್ವ್ ಮಾಡಿಕೊಂಡಿತ್ತು. ಅಕ್ಟೋಬರ್ 10ಕ್ಕೆ `ದೇವರ’ ರಿಲೀಸ್ ಘೋಷಣೆಯಾಗಿ ತಿಂಗಳೇ ಉರುಳಿದೆ. ಆದರೆ ಜೂ.ಎನ್‌ಟಿಆರ್‌ಗೆ ಟಕ್ಕರ್ ಕೊಡಲು ಎಂಟ್ರಿ ಕೊಟ್ಟಿದ್ದಾರೆ ರಜನಿಕಾಂತ್. ಜೈಲರ್ ಬಳಿಕ ತಲೈವಾ  ಅಭಿನಯದ ಹೈವೋಲ್ಟೇಜ್ ಚಿತ್ರ `ವೆಟೈಯನ್’ ಕೂಡ ಅಕ್ಟೋಬರ್ 10ಕ್ಕೆ ರಿಲೀಸ್ ಆಗುವುದು ಆಲ್‌ಮೋಸ್ಟ್ ಕನ್ಫರ್ಮ್. ದೇವರ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗ್ತಿರುವ 300 ಕೋಟಿ ಬಜೆಟ್ ಚಿತ್ರವಾಗಿದ್ರೆ `ವೆಟೈಯನ್’ (Vetaiyan) ಕೂಡ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗ್ತಿರುವ 160 ಕೋಟಿ ಬಜೆಟ್ ಚಿತ್ರ.

ಸೂಕ್ತ ವೆಕೇಷನ್‌ಗಾಗಿ ಕಾದಿದ್ದ `ವೈಟೈಯನ್’ ಟೀಮ್ ದಸರಾವನ್ನೇ ಬೆಸ್ಟ್ ಎಂದು ತೀರ್ಮಾನಿಸಿ ಆ ದಿನವನ್ನೇ ಘೋಷಣೆ ಮಾಡಿದೆ. ಇದರಿಂದಾಗಿ ದೇವರ ಚಿತ್ರತಂಡಕ್ಕೆ ತೀವ್ರ ಆಘಾತವಾಗಿದೆ. ಯಾವುದೇ ಪೈಪೋಟಿ ಬೇಡ ಎಂದು `ದೇವರ’ ತಂಡ ಮುಂಚೆಯೇ ರಿಲೀಸ್ ಡೇಟ್ ಘೋಷಿಸಿದ್ದರೂ ಸ್ಪರ್ಧೆ ಕೊಡಲು ಬಾಕ್ಸಾಫೀಸ್‌ನ ಸುಲ್ತಾನನನ್ನೇ ಕಣಕ್ಕಿಳಿಸಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಂದಹಾಗೆ ವೆಟೈಯನ್ ತಮಿಳು ದೇವರ ತೆಲುಗು ಮೂಲದ ಚಿತ್ರ. ಆದರೂ ಇದು ಪ್ಯಾನ್ ಇಂಡಿಯಾ ಚಿತ್ರ ಅನ್ನೋದೇ ಮುಖ್ಯ ವಿಷಯ. ಒಂದು ದೊಡ್ಡ ಚಿತ್ರಕ್ಕೇ ಥಿಯೇಟರ್ ಸಮಸ್ಯೆ ಎದುರಾಗೋ ಸಮಯದಲ್ಲಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ಕಣಕ್ಕಿಳಿದರೆ ಸಿನಿಪ್ರೇಮಿಗಳ ಮುಂದೆ ಆಫ್ಷನ್ ಬರುತ್ತೆ. ಹೀಗಾಗಿ ಒಂದಕ್ಕೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಆಗುವ ಸಂಭವವೂ ಇರುತ್ತೆ.

`ಜೈಲರ್’ ಬಳಿಕ ರಜನಿಕಾಂತ್ ತೆರೆ ಮೇಲೆ ಅಬ್ಬರಿಸೋಕೆ ಬರ್ತಿರುವ ಚಿತ್ರ `ವೆಟೈಯನ್’ ಆಗಿದ್ರೆ ಆರ್‌ಆರ್‌ಆರ್ ಯಶಸ್ಸಿನ ಬಳಿಕ ಸುದೀರ್ಘ ಮೂರು ವರ್ಷದ ಗ್ಯಾಪ್ ಬಳಿಕ ತೆರೆಗೆ ಬರ್ತಿರುವ ಜೂ.ಎನ್‌ಟಿಆರ್ ಅಭಿನಯದ ಚಿತ್ರ `ದೇವರ’. ಇವೆರಡೂ ಸದ್ಯದ ಗಲ್ಲಾಪೆಟ್ಟಿಗೆಯ ಮೋಸ್ಟ್ ಎಕ್ಸ್ಪೆಕ್ಟೆಡ್ ಲಿಸ್ಟ್ನಲ್ಲಿ ಮುಂಚೂಣಿಯಲ್ಲಿರುವ ಚಿತ್ರಗಳು. ಇಂತಹ ಚಿತ್ರಗಳೇ ಒಂದೇ ದಿನಾಂಕವನ್ನ ಅಂಟಿಕೊಂಡಂತೆ ಚಿಕ್ಕಪುಟ್ಟ ಬಜೆಟ್ ಸಿನಿಮಾಗಳಿಗೆ ದಿಕ್ಕುದೆಸೆ ಇಲ್ಲದಂತಾಗುತ್ತೆ. ಆದರೂ ಅನಿವಾರ್ಯ. ಈಗಾಗ್ಲೇ ಕನ್ನಡದಲ್ಲಿ ಧ್ರುವ ಸರ್ಜಾರ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್ ಅಕ್ಟೋಬರ್ ತಿಂಗಳಲ್ಲೇ ರಿಲೀಸ್ ದಿನಾಂಕ ಘೋಷಿಸಿದೆ. ಹಿಂದಿಯಲ್ಲೂ ಬಿಗ್‌ಸ್ಟಾರ್ ಚಿತ್ರಗಳು ಇದೇ ದಿನಾಂಕ ಗುರಿ ಇಟ್ಟುಕೊಂಡಿದೆ ಎನ್ನಲಾಗುತ್ತೆ. ಹೀಗಾಗಿ ಈ ದಸರಾ ಹಬ್ಬಕ್ಕೆ ಥಿಯೇಟರ್‌ನಲ್ಲಿ ಪಟಾಕಿ ಸೌಂಡ್ ಕೊಂಚ ಹೆಚ್ಚೇ ಇರುತ್ತೆ.